ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೋಟೆಕೋಶಿ-ತ್ರಿಶೂಲಿ ನದಿ ಪಾತ್ರದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಕನಿಷ್ಠ 626 ಮಂದಿ ಮೃತಪಟ್ಟಿದ್ದು, ಸುಮಾರು 2,500 ಜನ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.
ಭಾರೀ ಪ್ರವಾಹದಿಂದಾಗಿ ಮನೆ, ರಸ್ತೆಗಳು, ಸೇತುವೆಗಳು ಕೊಚ್ಚಿಕೊಂಡು ಹೋಗಿದ್ದು, ಜಲವಿದ್ಯುತ್ ಮೂಲಸೌಕರ್ಯಗಳಿಗೂ ಭಾರೀ ಹಾನಿಯಾಗಿದೆ. ದುರಂತ ಸಂಭವಿಸಿದ ಮೂರುದಿನಗಳಿಂದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಸಾವಿರಾರು ಮಂದಿ ಇನ್ನೂ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ.
ರಕ್ಷಣೆಗೆ ಧಾವಿಸಿದ ಭಾರತದ 11 ಸದಸ್ಯರ ತಂಡ
ಮಾನವೀಯತೆಯ ದೃಷ್ಟಿಯಿಂದ ನೇಪಾಳದಲ್ಲಿ ಅತ್ಯಂತ ಹಾನಿಗೊಳಗಾದ ಪ್ರದೇಶಗಳಲ್ಲಿ ಭಾರತವು ಸುರಂಗ ರಕ್ಷಣಾ ಕಾರ್ಯಾಚರಣೆಯಲ್ಲಿ ಪರಿಣತಿ ಹೊಂದಿರುವ ತಜ್ಞರು ಹಾಗೂ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಒಟ್ಟು 11 ಜನರ ತಂಡವನ್ನು ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಕಳುಹಿಸಲಾಗಿದೆ.
ವಿದೇಶಿ ರಕ್ಷಣಾ ತಂಡಗಳಿಗೆ ನೇಪಾಳ ಒಪ್ಪಿಗೆ
ಪ್ರವಾಹದ ಆರಂಭದಲ್ಲಿ ನಮಗೆ ವಿದೇಶಿ ರಕ್ಷಣಾ ತಂಡಗಳ ನೆರವಿನ ಅವಶ್ಯಕತೆ ಇಲ್ಲ ಎಂದು ಹೇಳಿದ್ದ ನೇಪಾಳ, ದುರಂತದ ತೀವ್ರತೆ ಹೆಚ್ಚಾದ ಕಾರಣ ನಿರ್ದಿಷ್ಟ ಪ್ರದೇಶಗಳಲ್ಲಿ ಇಂತಿಷ್ಟು ಸಂಖ್ಯೆಯ ರಕ್ಷಣಾ ತಂಡಗಳಿಗೆ ಮಾತ್ರ ಕಾರ್ಯನಿರ್ವಹಿಸಲು ಅವಕಾಶ ನೀಡಿದೆ.
ಇದನ್ನೂ ಓದಿ:
42 ಬೈಲಿ ಸೇತುವೆ ನಿರ್ಮಾಣಕ್ಕೆ ಭಾರತ, ಚೀನಾ ನೆರವು
ಸಂಪರ್ಕ ಕಡಿತಗೊಂಡಿರುವ ಪ್ರದೇಶಗಳಲ್ಲಿ ಮತ್ತೆ ಸಂಪರ್ಕ ಸಾಧಿಸಲು ನೇಪಾಳವು ಭಾರತ ಚೀನಾದ ನೆರವು ಕೋರಿದ್ದು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ 42 ಬೈಲಿ ಸೇತುವೆಗಳನ್ನು ನಿರ್ಮಿಸುವಂತೆ ಮನವಿ ಮಾಡಿದೆ.
ಸಾಮಾನ್ಯ ಮಳೆಯಲ್ಲ, ಹಿಮನದಿ ಕುಸಿತವೇ ಕಾರಣ?
ಆಗಸ್ಟ್ 26ರಂದು ಸಂಭವಿಸಿದ ಈ ದಿಢೀರ್ ಪ್ರವಾಹಕ್ಕೆ ಸಾಮಾನ್ಯ ಮುಂಗಾರು ಮಳೆಯೇ ಪ್ರಮುಖ ಕಾರಣವಲ್ಲ ಎಂದು ವರದಿಯಾಗಿದೆ. ನೇಪಾಳ-ಚೀನಾ ಗಡಿ ಸಮೀಪ ಹಿಮನದಿ ಮತ್ತು ಬಂಡೆಗಳ ದೊಡ್ಡ ಭಾಗ ಕುಸಿದು, ಲ್ಹೆಂಡೆ ಖೋಲಾ ನದಿಗೆ ಭಾರೀ ಪ್ರಮಾಣದ ಹಿಮ, ಕಲ್ಲು ಹಾಗೂ ನೀರು ಹರಿದಿದೆ. ಬಳಿಕ ಈ ನೀರಿನ ಪ್ರವಾಹ ಭೋಟೆ ಕೋಶಿ ನದಿಗೆ ಸೇರಿ ರಸುವಾ ಜಿಲ್ಲೆ ಸೇರಿದಂತೆ ಕೆಳಭಾಗದಲ್ಲಿ ಭಾರೀ ವಿನಾಶ ಸೃಷ್ಟಿಸಿದೆ.
ಹಿಮಾಲಯ ಪ್ರದೇಶದಲ್ಲಿ ತಾಪಮಾನ ಏರಿಕೆ, ಹಿಮ ಕರಗುವಿಕೆ ಮತ್ತು ಪರ್ಮಾಫ್ರಾಸ್ಟ್ ದುರ್ಬಲಗೊಳ್ಳುತ್ತಿರುವುದು ಇಂತಹ ಹಿಮನದಿ ಕುಸಿತಗಳ ಅಪಾಯವನ್ನು ಹೆಚ್ಚಿಸಬಹುದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಒಟ್ಟಾರೆ, ನೇಪಾಳ ಕಂಡ ಈ ಭೀಕರ ದುರಂತದಲ್ಲಿ ನೂರಾರು ಜೀವಗಳು ಬಲಿಯಾಗಿದ್ದು, ಸಾವಿರಾರು ಮಂದಿ ನಾಪತ್ತೆಯಾಗಿದ್ದಾರೆ. ಸದ್ಯ ನಾಪತ್ತೆಯಾದವರ ಪತ್ತೆ, ಸಂತ್ರಸ್ತರ ರಕ್ಷಣೆ ಮತ್ತು ಕಡಿತಗೊಂಡ ಸಂಪರ್ಕ ವ್ಯವಸ್ಥೆಯನ್ನು ಪುನಃಸ್ಥಾಪಿಸುವುದೇ ನೇಪಾಳದ ಮುಂದಿರುವ ಅತಿ ದೊಡ್ಡ ಸವಾಲಾಗಿದೆ.



