ಹೊಸದಿಗಂತ ವರದಿ,ಮಂಗಳೂರು:
ಮಂಗಳೂರು ದಸರಾ ಎಂದೇ ವಿಶ್ವ ವಿಖ್ಯಾತಿ ಪಡೆದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವರಾತ್ರಿ ಉತ್ಸವಕ್ಕೆ ಗುರುವಾರ ಅದ್ದೂರಿ ಚಾಲನೆ ದೊರೆತಿದೆ.
ಕ್ಷೇತ್ರದ ಅಭಿವೃದ್ಧಿಯ ರೂವಾರಿಯೂ ಆಗಿರುವ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಉತ್ಸವಕ್ಕೆ ಚಾಲನೆ ನೀಡಿದರು. ದೇವಳದ ಪ್ರಾಂಗಣದಲ್ಲಿ ಮಂಗಳೂರು ದಸರಾದ ವಿಶೇಷ ಆಕರ್ಷಣೆಯಾದ ಶ್ರೀ ಶಾರದಾ ಮಾತೆಯ ವಿಗ್ರಹವನ್ನು ಪ್ರದಕ್ಷಿಣೆಯ ಬಳಿಕ ದರ್ಬಾರ್ ಹಾಲನಲ್ಲಿ ಪ್ರತಿಷ್ಠಾಪನೆ ಮಾಡುವ ಮೂಲಕ ಅ. 13 ರವರೆಗೆ ನಡೆಯಲಿರುವ ಮಂಗಳೂರು ದಸರಾ ಕಾರ್ಯಕ್ರಮ ಉದ್ಘಾಟನೆಗೊಂಡಿತು.
ದಸರಾದ ಪ್ರಥಮ ದಿನದಂದೇ ಕ್ಷೇತ್ರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಕ್ಷೇತ್ರವನ್ನು ವಿಶೇಷ ಅಲಂಕಾರದೊಂದಿಗೆ ಸಿಂಗರಿಸಲಾಗಿದೆ.
ಮಂಗಳಾದೇವಿಯಲ್ಲೂ ನವರಾತ್ರಿ ಉತ್ಸವ ಆರಂಭ
ಸಾವಿರಾರು ವರ್ಷಗಳ ಇತಿಹಾಸ ಇರುವ ಮಂಗಳೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲೂ ನವರಾತ್ರಿ ಮಹೋತ್ಸವದ ಆರಂಭಗೊಂಡಿದೆ. ಅ.14 ರವರೆಗೆ ಇಲ್ಲಿ ನವರಾತ್ರಿ ಉತ್ಸವ ವಿಜೃಂಬಣೆಯಿಂದ ಜರಗಲಿದೆ.