ಹೊಸದಿಗಂತ ಡಿಜಿಟಲ್ ಡೆಸ್ಕ್:
ನವರಾತ್ರಿಯ 9ನೇ ದಿನವಾದ ಇಂದು ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ಸಾಂಪ್ರದಾಯಿಕ ಆಯುಧ ಪೂಜೆ ನೆರವೇರಲಿದೆ. ರಾಜವಂಶಸ್ಥ ಯದುವೀರ್ ಪಟ್ಟದ ಆನೆ, ಕುದುರೆ, ಹಸು ಸೇರಿ ಖಾಸಾ ಆಯುಧಗಳು, ಅರಮನೆ ವಾಹನಗಳಿಗೆ ಪೂಜೆ ಸಲ್ಲಿಸಲಿದ್ದು, ದಸರಾ ವೈಭವ ಮತ್ತಷ್ಟು ಕಳೆಗಟ್ಟಲಿದೆ.
ಮೈಸೂರಿನಲ್ಲಿ ನಾಡಹಬ್ಬ ದಸರಾ ಮಹೋತ್ಸವದ ಸಂಭ್ರಮ ಮನೆಮಾಡಿದೆ. ನವರಾತ್ರಿಯ 9 ದಿನವಾದ ಇಂದು ಅರಮನೆಯಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಆಯುಧ ಪೂಜಾ ನೆರವೇರಿಸಲಿದ್ದಾರೆ. ಈ ಹಿನ್ನೆಲೆ ಅರಮನೆಯಲ್ಲಿ ಬೆಳಗ್ಗಿನಿಂದಲೇ ಆಯುಧ ಪೂಜೆಯ ಧಾರ್ಮಿಕ ಕೈಂಕರ್ಯಗಳು ಆರಂಭವಾಗಿವೆ.
ಬೆಳಿಗ್ಗೆ 6ಗಂಟೆಗೆ ಅರಮನೆಯ ಚಾಮುಂಡಿ ತೊಟ್ಟಿಯಲ್ಲಿ ಚಂಡಿಕಾಹೋಮ ನೆರವೇರಲಿದ್ದು, ಪಟ್ಟದ ಆನೆ, ಕುದುರೆ, ಹಸು ಆನೆ ಬಾಗಿಲಿಗೆ ಆಗಮನವಾಗಲಿವೆ. ಖಾಸಗಿ ಆಯುಧಗಳನ್ನ ಆನೆ ಬಾಗಿಲು ಮೂಲಕ ಶ್ರೀ ಕೋಡಿ ಸೋಮೇಶ್ವರ ದೇವಾಲಯಕ್ಕೆ ರವಾನೆ ಮಾಡಲಾಗುತ್ತದೆ. ಬಳಿಕ ಕೋಡಿ ಸೋಮೇಶ್ವರ ದೇವಾಲಯದಿಂದ ಖಾಸಾ ಆಯುಧಗಳನ್ನ ಆನೆ ಬಾಗಿಲ ಮುಖಾಂತರ ಅರಮನೆಯ ಕಲ್ಯಾಣ ಮಂಟಪಕ್ಕೆ ರವಾನೆ ಮಾಡಲಾಗುತ್ತದೆ. ನಂತರ ಚಂಡಿ ಹೋಮ ಪೂರ್ಣಾಹುತಿ ನೆರವೇರಲಿದೆ. ಆ ನಂತರ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಆನೆ ಬಾಗಿಲಿಗೆ ಬಂದು, ಅರಮನೆಯ ಕಲ್ಯಾಣ ಮಂಟಪದಲ್ಲಿ ಆಯುಧ ಪೂಜೆ ನೆರವೇರಲಿದೆ.