Monday, December 22, 2025

ನೌಕಾಪಡೆ ರಹಸ್ಯ ಸೋರಿಕೆ ಕೇಸ್: ಮಲ್ಪೆಯಲ್ಲಿ ಗುಜರಾತ್ ಮೂಲದ ಮತ್ತೋರ್ವ ಆರೋಪಿ ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ನೌಕಾಪಡೆಯ ಅತ್ಯಂತ ರಹಸ್ಯ ಮಾಹಿತಿಗಳನ್ನ ನೆರೆರಾಷ್ಟ್ರ ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಲ್ಪೆ ಪೊಲೀಸರು ಕಾರ್ಯಾಚರಣೆ ನಡೆಸಿ ಗುಜರಾತ್ ಮೂಲದ ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಮಲ್ಪೆಯ ಕೊಚ್ಚಿನ್ ಶಿಪ್‌ಯಾರ್ಡ್ ಘಟಕದಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಗುಜರಾತ್ ಆನಂದ್ ಜಿಲ್ಲೆಯ ಕೈಲಾಸ್ ನಗರಿ ನಿವಾಸಿ ಹಿರೇಂದ್ರ (34) ಬಂಧಿತ ಆರೋಪಿ. ಈ ಹಿಂದೆ ನವೆಂಬರ್ 21ರಂದು ಉತ್ತರ ಪ್ರದೇಶ ಮೂಲದ ರೋಹಿತ್ ಮತ್ತು ಸಂತ್ರಿ ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದರು. ಈ ಇಬ್ಬರು ಆರೋಪಿಗಳ ವಿಚಾರಣೆ ನಡೆಸಿದಾಗ ಹಿರೇಂದ್ರನ ಕೈವಾಡ ಪತ್ತೆಯಾಗಿದೆ.

ತನಿಖೆಯಲ್ಲಿ ಬಯಲಾದ ಅಂಶಗಳು:

ಬಂಧಿತ ಹಿರೇಂದ್ರ, ಈ ಹಿಂದೆ ಸೆರೆಯಾಗಿದ್ದ ರೋಹಿತ್ ಮತ್ತು ಸಂತ್ರಿಗೆ ಹಣದ ಆಮಿಷವೊಡ್ಡಿ ಮೊಬೈಲ್ ಸಿಮ್ ಕಾರ್ಡ್‌ಗಳನ್ನು ಒದಗಿಸುತ್ತಿದ್ದ ಎನ್ನಲಾಗಿದೆ. ಆರೋಪಿಗಳು ಮಲ್ಪೆ ಶಿಪ್‌ಯಾರ್ಡ್‌ನಲ್ಲಿರುವ ಯುದ್ಧನೌಕೆಗಳ ಸಂಖ್ಯೆ, ಹಡಗುಗಳ ಸಂಚಾರದ ಗೌಪ್ಯ ಪಟ್ಟಿ ಹಾಗೂ ನೌಕಾಪಡೆಗೆ ಸಂಬಂಧಿಸಿದ ತಾಂತ್ರಿಕ ಮಾಹಿತಿಗಳನ್ನ ಪಾಕಿಸ್ತಾನಕ್ಕೆ ರವಾನಿಸುತ್ತಿದ್ದರು ಎಂದು ತಿಳಿದುಬಂದಿದೆ.

ಶಿಪ್‌ಯಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದ ಈ ಸಿಬ್ಬಂದಿಗಳ ನಡವಳಿಕೆಯಲ್ಲಿ ಅನುಮಾನ ವ್ಯಕ್ತಪಡಿಸಿದ ಹಿರಿಯ ಅಧಿಕಾರಿಗಳು ಮಲ್ಪೆ ಪೊಲೀಸರಿಗೆ ದೂರು ನೀಡಿದ್ದರು. ಈ ದೂರೇ ದೇಶದ್ರೋಹದ ಈ ದೊಡ್ಡ ಜಾಲವನ್ನು ಭೇದಿಸಲು ಸಹಕಾರಿಯಾಗಿದೆ.

ಪ್ರಸ್ತುತ ಪ್ರಮುಖ ಇಬ್ಬರು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದು, ಇದೀಗ ಬಂಧಿತನಾಗಿರುವ ಹಿರೇಂದ್ರನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಜಾಲದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ಚುರುಕುಗೊಂಡಿದೆ.

error: Content is protected !!