ನಕ್ಸಲ್‌ ಭಾಷೆ ಮಾತನಾಡುವವರಿಗೆ ರಾಷ್ಟ್ರದ ಏಕತೆ ಅರ್ಥವಾಗಲ್ಲ: ಸಂಸತ್ ನಲ್ಲಿ ಪ್ರಧಾನಿ ಮೋದಿ ಗುಡುಗು

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರಪತಿ ದ್ರೌಪದಿ ಮುರ್ಮುಅವರ ಭಾಷಣದ ವಂದನಾ ನಿರ್ಣಯಕ್ಕೆ ಉತ್ತರಿಸಿ ಪ್ರಧಾನಿ ಮೋದಿ ಅವರು ಇಂದು ಸಂಸತ್ ನಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಇಂದು ಕೆಲವರು ನಗರ ನಕ್ಸಲ್‌ ಭಾಷೆಯನ್ನು ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಆ ಮೂಲಕ ನಮ್ಮ ದೇಶದ ವಿರುದ್ಧವೇ ಹೋರಾಟ ಘೋಷಿಸುತ್ತಿದ್ದಾರೆ. ಈ ಭಾಷೆಯನ್ನು ಮಾತನಾಡುವವರಿಗೆ ಸಂವಿಧಾನ ಅಥವಾ ರಾಷ್ಟ್ರದ ಏಕತೆ ಅರ್ಥವಾಗುವುದಿಲ್ಲಎಂದು ಅವರು ಗುಡುಗಿದರು.

ಜ. 15ರಂದು ಮಾತನಾಡಿದ್ದ ರಾಹುಲ್ ಗಾಂಧಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಪ್ರತಿಯೊಂದು ಸಾಂವಿಧಾನಿಕ ಸಂಸ್ಥೆಯನ್ನು ವಶಪಡಿಸಿಕೊಂಡಿವೆ. ನಾವು ಈಗ ಬಿಜೆಪಿ, ಆರ್‌ಎಸ್‌ಎಸ್ ಮತ್ತು ಭಾರತದ ರಾಜ್ಯ ವ್ಯವಸ್ಥೆಯ ವಿರುದ್ಧ ಹೋರಾಡುತ್ತಿದ್ದೇವೆ ಎಂದು ಹೇಳಿದ್ದರು.

ಲೋಕಸಭೆಯಲ್ಲಿ ಕಾಂಗ್ರೆಸ್ ಅನ್ನು ಗುರಿಯಾಗಿಸಿಕೊಂಡು ಮಾತನಾಡಿದ ಮೋದಿ, ದಶಕಗಳಿಂದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಸಾಂವಿಧಾನಿಕ ಹಕ್ಕುಗಳಿಂದ ವಂಚಿತವಾಗಿದ್ದು, ಇದು ಜನರಿಗೆ ಮತ್ತು ಸಂವಿಧಾನಕ್ಕೆ ಮಾಡಿದ ಅನ್ಯಾಯ ಎಂದು ಹೇಳಿದರು.

ನಾವು ಸಂವಿಧಾನದ ಆಶಯದಂತೆ ಬದುಕುತ್ತೇವೆ ಮತ್ತು ಅದಕ್ಕಾಗಿಯೇ ನಾವು ಬಲವಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ನಮ್ಮ ಸಂವಿಧಾನವು ತಾರತಮ್ಯ ಮಾಡುವ ಹಕ್ಕನ್ನು ನೀಡುವುದಿಲ್ಲ ಎಂದು ಮೋದಿ ಪ್ರತಿಪಾದಿಸಿದರು.

ನಾವು ಯುವಜನತೆಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ಆದರೆ ಕೆಲವು ಪಕ್ಷಗಳು ಯುವಕರನ್ನು ಮೋಸ ಮಾಡುತ್ತಿವೆ. ಅವರು ಚುನಾವಣೆಯ ಸಮಯದಲ್ಲಿ ಭತ್ಯೆಗಳ ಭರವಸೆ ನೀಡುತ್ತಾರೆ ಆದರೆ ಆ ಭರವಸೆಗಳನ್ನು ಈಡೇರಿಸುವುದಿಲ್ಲ ಎಂದು ದೂರಿದರು. ಈ ಮೂಲಕ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳನನು ಟೀಕಿಸಿದರು.

ರಾಹುಲ್‌ ಗಾಂಧಿ ಹೆಸರು ಹೇಳದೆ ಪರೋಕ್ಷವಾಗಿ ಅವರು ವಿರುದ್ಧ ವಾಗ್ದಾಳಿ ನಡೆಸಿ, ‘ತಮ್ಮ ಮನರಂಜನೆಗಾಗಿ ಬಡವರ ಗುಡಿಸಲಿನೆದುರು ಹೋಗಿ ಫೋಟೊ ಶೂಟ್ ಮಾಡಿಸಿಕೊಳ್ಳುವವರಿಗೆ ಸಂಸತ್​ನಲ್ಲಿ ಬಡವರ ಕುರಿತಾದ ಚರ್ಚೆ, ಆ ಕುರಿತಾದ ಭಾಷಣ ನೀರಸ ಅಥವಾ ಬೋರಿಂಗ್ ಆಗಿಯೇ ಇರುತ್ತದೆ’ʼ ಎಂದು ಲೇವಡಿ ಮಾಡಿದರು.

 

- Advertisement - Ply

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!