ಹೊಸದಿಗಂತ ವರದಿ, ಮಂಗಳೂರು:
ನಕ್ಸಲ್ ನಾಯಕ ವಿಕ್ರಂ ಗೌಡನ ಹತ್ಯೆ ಬಳಿಕ ನಕ್ಸಲರ ಹಾದಿ ಕಠಿಣವಾಗಿದೆ. ಆತನ ಸಹಚರರಿಗೆ ಸಮಾಜದ ಮುಖ್ಯವಾಹಿನಿಗೆ ಬರಲು ಶರಣಾಗುವಂತೆ ಅವಕಾಶ ನೀಡಲಾಗಿದೆ. ನಕ್ಸಲರು ತಮ್ಮ ನಿಲುವು ಬದಲಿಸುವುದು ಒಳಿತು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶರಣಾಗುವ ನಕ್ಸಲರಿಗೆ ಸರ್ಕಾರದಿಂದಲೇ ಜೀವನಕ್ಕೆ ಪ್ಯಾಕೇಜ್ ಘೋಷಣೆ ಮಾಡಿದ್ದು, ಶರಣಾಗುವಂತೆ ನಕ್ಸಲರಿಗೆ ಅರಣ್ಯಗಳಲ್ಲಿ ಕೂಂಬಿಂಗ್ ನಿರತ ಪೊಲೀಸ್ ಪಡೆ ಆಹ್ವಾನ ನೀಡಿದೆ. ಹಾಗಾಗಿ ಶರಣಾದರೆ ನಕ್ಸಲರಿಗೇ ಒಳ್ಳೆಯದು ಎಂದು ಸ್ಪಷ್ಟಪಡಿಸಿದರು.
ಹಾಸನದಲ್ಲಿ ಕಾಂಗ್ರೆಸ್ ನಡೆಸುವ ಸ್ವಾಭಿಮಾನ ಸಮಾವೇಶಕ್ಕೆ ಅಸಮಾಧಾನದ ಅನಾಮಧೇಯ ಪತ್ರದ ಕುರಿತಂತೆ ಮಾತನಾಡಿದ ಡಾ.ಪರಮೇಶ್ವರ್, ಸಮಾವೇಶಕ್ಕೆ ಯಾರ ಅಸಮಾಧಾನವೂ ಇಲ್ಲ. ಅನಾಮಧೇಯ ಪತ್ರವನ್ನು ಬಿಜೆಪಿಯವರು ಯಾಕೆ ಬರೆಯಬಾರದು? ಅವರೇ ಅನಾಮಧೇಯ ಪತ್ರಗಳನ್ನು ಬರೆಯುತ್ತಾರೆ ಎಂದು ಆರೋಪಿಸಿದರು.
ಜನಸ್ನೇಹಿ ಠಾಣೆಗೆ ತಲಾ 1 ಲಕ್ಷ ರೂ. ಜನಸ್ನೇಹಿ ಪೊಲೀಸ್ ಠಾಣೆಗಾಗಿ ತಲಾ 1 ಲಕ್ಷ ರೂಪಾಯಿ ನೀಡಲಾಗುವುದು. ಜನರು ಪೊಲೀಸ್ ಠಾಣೆಗೆ ಬರುವವರನ್ನೆಲ್ಲಾ ಕಳ್ಳನೆಂದು ತಿಳಿಯುವ ಮನಸ್ಥಿತಿ ಬದಲಾಗಬೇಕು. ಜನಸ್ನೇಹಿ ಪೊಲೀಸ್ ಠಾಣೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಬರುವವರಿಗೆ ಚಹಾ- ಕಾಫಿ ಸೇರಿದಂತೆ ಆದರದ ವ್ಯವಸ್ಥೆಗೆ ತಲಾ 1 ಲಕ್ಷ ರೂ. ಈ ಹಿಂದೆ ನೀಡಲಾಗುತ್ತಿತ್ತು. ಅದನ್ನು ಮತ್ತೆ ಮುಂದುವರಿಸಲಾಗುವುದು ಎಂದು ಗೃಹಸಚಿವರು ನುಡಿದರು.
ರಾಜ್ಯದಲ್ಲಿ ಒಂದು ಲಕ್ಷಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳಿದ್ದು, ಶೇ.45ರಷ್ಟು ಪೊಲೀಸರಿಗೆ ಕ್ವಾಟ್ರಸ್ ನೀಡುವ ಕಾರ್ಯ ಆಗಿದೆ. ಎಲ್ಲರಿಗೂ ಕ್ವಾಟ್ರಸ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ. ಇದಕ್ಕಾಗಿ ಕಳೆದ ಮೂರು ತಿಂಗಳ ಹಿಂದೆ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ಇಲಾಖೆಗೆ ಬಂದೂಕು ಬೇಡ, ಆದರೆ ಮನೆ ನಿರ್ಮಾಣಕ್ಕೆ ೫ ಸಾವಿರ ಕೋಟಿ ರೂಪಾಯಿ ಒದಗಿಸಿ ಎಂಬ ಬೇಡಿಕೆ ಇಟ್ಟಿರುವುದಾಗಿ ಡಾ.ಪರಮೇಶ್ವರ್ ಹೇಳಿದರು.