ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ: ಕಾಯಕ ಯೋಗಿಗೆ ಭಕ್ತಿಭಾವ ಸಮರ್ಪಣೆ

ಹೊಸದಿಗಂತ ವರದಿ, ಚಿತ್ರದುರ್ಗ : 
ಮಾಡಿದಷ್ಟು ನೀಡು ಭಿಕ್ಷೆ ಎಂಬ ತತ್ವ ಸಂದೇಶ ಸಾರಿ ಶ್ರೀಕ್ಷೇತ್ರ ನಾಯಕನಹಟ್ಟಿ ನೆಲಸಿದ ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ ಭಾನುವಾರ ವಿಜೃಂಭಣೆಯಿಂದ ಜರುಗಿತು. ಸುಡು ಬಿಸಿಲ ನಡುವೆಯೂ ಲಕ್ಷಾಂತರ ಭಕ್ತರು ವೈಭವದ ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ಸಾಕ್ಷೀಯಾದರು. ಭಕ್ತಿ ಭಾವ ಸಮರ್ಪಿಸಿದರು.

ಮಧ್ಯ ಕರ್ನಾಟಕದ ಐತಿಹಾಸಿಕ ನಾಯಕನಹಟ್ಟಿ ಗುರು ತಿಪ್ಪೇರುದ್ರಸ್ವಾಮಿ ದೊಡ್ಡ ರಥೋತ್ಸವ ಕಣ್ತುಂಬಿಕೊಳ್ಳಲು ಭಕ್ತರು ಬೆಳಿಗ್ಗೆಯಿಂದಲೇ ಜಾತ್ರೆಗಾಗಿ ನಾಯಕನಹಟ್ಟಿಯತ್ತ ಮುಖ ಮಾಡಿದ್ದರು. ಗುರು ತಿಪ್ಪೇರುದ್ರಸ್ವಾಮಿಯ ಹೊರಮಠ ಹಾಗೂ ಒಳಮಠ ಎರಡೂ ಕಡೆಗಳಲ್ಲಿ ಬೆಳಗ್ಗೆಯಿಂದಲೇ ಬಿಡುವಿಲ್ಲದಂತೆ ಪೂಜಾ ಕಾರ್ಯಗಳು ನಡೆದವು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ಮಧ್ಯಾಹ್ನ ೨ ಗಂಟೆಯಿಂದಲೇ ಒಳಮಠದಲ್ಲಿ ಮುಖ್ಯ ಅರ್ಚಕರ ನೇತೃತ್ವದಲ್ಲಿ ಉತ್ಸವ ಮೂರ್ತಿ ಹೊತ್ತು ತರುವ ಪಲ್ಲಕ್ಕಿಯನ್ನು ಧಾರ್ಮಿಕ ವಿಧಿ ವಿಧಾನಗಳಿಂದ ಸಿಂಗರಿಸಲಾಯಿತು. ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ಇರಿಸಿ, ರಥೋತ್ಸವದ ಬಳಿ ತಂದು ಸಜ್ಜುಗೊಳಿಸಲಾಯಿತು. ಮಧ್ಯಾಹ್ನ ೪.೦೫ ರ ಸುಮಾರಿಗೆ ಚಿತ್ತಾ ನಕ್ಷತ್ರದಲ್ಲಿ ಅಸಂಖ್ಯ ಭಕ್ತರು ತಿಪ್ಪೇರುದ್ರಸ್ವಾಮಿ ರಥವನ್ನು ರಥ ತೇರುಬೀದಿಯಿಂದ ಹೊರಮಠದವರೆಗೆ ಎಳೆಯುವ ಮೂಲಕ ಭಕ್ತಿ ಸಮರ್ಪಣೆ ಮಾಡಿದರು.

ರಥವು ತೇರು ಬೀದಿಯಿಂದ ಪಾದಗಟ್ಟೆಯವರೆಗೆ ಚಲಿಸುವಾಗ ಭಕ್ತರು ರಥಕ್ಕೆ ಬಾಳೆಹಣ್ಣು, ಕಾಳುಮೆಣಸು, ಧವನ, ಹೂವು, ಚೂರು ಬೆಲ್ಲವನ್ನು ಸಮರ್ಪಿಸಿ ತಮ್ಮ ಇಷ್ಟಾರ್ಥವನ್ನು ಈಡೇರಿಸುವಂತೆ ಭಕ್ತಿ ಪೂರ್ವಕವಾಗಿ ಪ್ರಾರ್ಥಿಸಿದರು. ‘ಶ್ರೀ ತಿಪ್ಪೇರುದ್ರಸ್ವಾಮಿಗೆ ಜಯವಾಗಲಿ’, ‘ಕಾಯಕ ಯೋಗಿಗೆ ಜಯವಾಗಲಿ’ ತಿಪ್ಪೇರುದ್ರಸ್ವಾಮಿ ಮಹಾರಾಜ್ ಕಿ ಜೈ’ ಎನ್ನುವ ಜಯಘೋಗಳನ್ನು ಕೂಗುತ್ತಾ ರಥದ ದೊಡ್ಡ ಗಾತ್ರದ ಮಿಣಿ ಹಗ್ಗ ಹಿಡಿದು ತೇರನೆಳೆದು ಪುನೀತರಾದರು. ನಾಡಿನ ಸುಭಿಕ್ಷೆ ಹಾಗೂ ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸಿದರು.

೬೩ ಲಕ್ಷ ರೂ.ಗಳಿಗೆ ಮುಕ್ತಿಭಾವುಟ ಹರಾಜು : ರಥೋತ್ಸವಕ್ಕೂ ಮುನ್ನ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆಯ ವಿಶೇಷಗಳಲ್ಲಿ ಒಂದಾಗಿರುವ ಮುಕ್ತಿ ಬಾವುಟದ ಹರಾಜು ನಡೆಸಲಾಯಿತು. ಈ ಬಾರಿ ರಥದ ಮುಂದೆ ನಡೆದ ಹಟ್ಟಿ ತಿಪ್ಪೇಶನ ಮುಕ್ತಿ ಭಾವುಟ ಭರ್ಜರಿ ಮೊತ್ತಕ್ಕೆ ಹರಾಜಾಯಿತು.  ಈ ವರ್ಷದ ಮುಕ್ತಿ ಭಾವುಟವನ್ನು ಬೆಂಗಳೂರು ಮೂಲದ ನಾಯಕನಹಟ್ಟಿ ಅಳಿಯ, ಉದ್ಯಮಿ ತೇಜಸ್ವಿ ಆರಾಧ್ಯ ಅವರು ೬೩ ಲಕ್ಷ ರೂ.ಗಳಿಗೆ ಹರಾಜು ಮೂಲಕ ಪಡೆದುಕೊಂಡರು.

ಈ ಸಂದರ್ಭದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಸಂಸದ ಗೋವಿಂದ ಕಾರಜೋಳ, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ, ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಡಾ.ಬಿ.ಯೋಗೇಶ ಬಾಬು, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಮಹಬೂಬ್ ಜಿಲಾನ್ ಸೇರಿದಂತೆ ಮತ್ತಿತರರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!