ಹೊಸದಿಗಂತ ವರದಿ, ದಾವಣಗೆರೆ:
ಗೋವುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ವಾಹನವನ್ನು ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡೆದು ಗೋವುಗಳನ್ನು ರಕ್ಷಣೆ ಮಾಡಿದ್ದಾರೆ.
ಹುಬ್ಬಳ್ಳಿಯಿಂದ ದಾವಣಗೆರೆ ಕಡೆಗೆ ಆಗಮಿಸುತ್ತಿದ್ದ ವೇಳೆ ನಗರದ ಹೊರವಲಯದಲ್ಲಿರುವ ಹಳೇ ಕುಂದುವಾಡ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅನುಮಾನಗೊಂಡು ವಾಹನವೊಂದನ್ನು ನಿಲ್ಲಿಸಿ ವಿಚಾರಿಸಿದಾಗ ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಸಣ್ಣ ವಾಹನದಲ್ಲಿ ನಾಲ್ಕು ದೊಡ್ಡ ಹಸುಗಳನ್ನು ತುಂಬಿಕೊಂಡು ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು. ಚಾಲಕನ ಬಳಿ ಯಾವುದೇ ದಾಖಲೆ ಇಲ್ಲದೇ ಹಸುಗಳ ಸಾಗಾಟ ನಡೆಯುತ್ತಿತ್ತು. ಪ್ರಮೋದ್ ಮುತಾಲಿಕ್ ತಕ್ಷಣವೇ ವಿದ್ಯಾನಗರ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ವಾಹನವನ್ನು ವಶಕ್ಕೆ ಪಡೆದರು.
ಇದೇ ವೇಳೆ ಪ್ರಮೋದ್ ಮುತಾಲಿಕ್, ರಾಜ್ಯದಲ್ಲಿ ಗೋಹತ್ಯೆ ನಿಷೇಧವಿದ್ದರೂ ಅಕ್ರಮವಾಗಿ ಗೋವುಗಳನ್ನು ಕಸಾಯಿಖಾನೆಗೆ ಸಾಗಾಟ ಮಾಡುತ್ತಿರುವುದು ಖಂಡನೀಯ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರುವುದರಿಂದಲೇ ಗೋವು, ಜನಸಾಮಾನ್ಯರಿಗೆ ರಕ್ಷಣೆ ಇಲ್ಲದಂತಾಗಿದೆ. ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.