ಮೂರನೇ ಅವಧಿಗೆ ಆಡಳಿತ ನಡೆಸಲು ಎನ್‌ಡಿಎ ಸಜ್ಜು, ಇದು ದೇಶದ 140 ಕೋಟಿ ಜನರ ಗೆಲುವು: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಲೋಕಸಭೆ ಚುನಾವಣೆ ಫಲಿತಾಂಶವು ಪ್ರಕಟವಾಗಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಬಹುಮತ ದೊರೆತಿದೆ. ಹಾಗಾಗಿ, ನರೇಂದ್ರ ಮೋದಿ (Narendra Modi) ಅವರು ದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದರು.

ದೇಶದ ನಾಗರಿಕರು ಬಿಜೆಪಿ ಹಾಗೂ ಎನ್‌ಡಿಎ ಮೇಲೆ ವಿಶ್ವಾಸ ಇಟ್ಟಿದ್ದಾರೆ. 1962ರ ಬಳಿಕ ಇದೇ ಮೊದಲ ಬಾರಿಗೆ ಒಂದು ಸರ್ಕಾರ 2 ಸತತ ಅವಧಿ ಪೂರೈಸಿದ ಬಳಿಕ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿದೆ . ಇದು ದೇಶದ ಪ್ರಜಾಪ್ರಭುತ್ವದ ಗೆಲುವಾಗಿದೆ. ಇದು ಭಾರತದ ಸಂವಿಧಾನಕ್ಕೆ ಸಿಕ್ಕ ಗೆಲುವಾಗಿದೆ. ಇದು ವಿಕಸಿತ ಭಾರತದ ಉದ್ದೇಶದ ವಿಜಯವಾಗಿದೆ. ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ ಎಂಬ ಮಂತ್ರದ ಜಯವಾಗಿದೆ. ದೇಶದ 140 ಕೋಟಿ ಜನರ ಗೆಲುವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

10 ವರ್ಷಕ್ಕೂ ಮೊದಲು ದೇಶವು ಬದಲಾವಣೆ ಬಯಸುತ್ತಿತ್ತು. 2014ರಲ್ಲಿ ನಾಗರಿಕರು ನಿರಾಸೆಯ ಕಡಲಲ್ಲಿ ಮುಳುಗಿದ್ದರು. ಯುವಕರು ತಮ್ಮ ಭವಿಷ್ಯವನ್ನು ನೆನೆದುಕೊಂಡು ಆತಂಕದಲ್ಲಿದ್ದರು. ಬಡವರು ಸಂಕಷ್ಟದಲ್ಲಿದ್ದರು. ಅಂತಹ ಕಾಲಘಟದಲ್ಲಿ ಬಿಜೆಪಿ ಎಂಬ ಆಶಾವಾದವನ್ನು ಜನ ಆಯ್ಕೆ ಮಾಡಿದರು. ನಾವು ಕೂಡ ಕಳೆದ 10 ವರ್ಷಗಳಿಂದ ಪರಿಶ್ರಮ ವಹಿಸಿದೆವು. ಜನರ ಪರವಾಗಿ ಕೆಲಸ ಮಾಡಿದೆವು. ಇದೇ ಕಾರಣಕ್ಕೆ 2019ರಲ್ಲಿ ಜನ ನಮ್ಮನ್ನು ಆಯ್ಕೆ ಮಾಡಿದರು. ಈಗ 2024ರಲ್ಲೂ ಜನರ ಆಶೀರ್ವಾದ ಪಡೆಯಲು ದೇಶದ ಮೂಲೆ ಮೂಲೆ ಸುತ್ತಿದೆ. ಜನರು ಕೂಡ ಮೂರನೇ ಬಾರಿಗೆ ಎನ್‌ಡಿಎಗೆ ಜನರ ಬೆಂಬಲ ಸಿಕ್ಕಿದೆ. ಹಾಗಾಗಿ, ಜನರಿಗೆ ನಾನು ವಿನಮ್ರವಾಗಿ ಧನ್ಯವಾದ ತಿಳಿಸಲು ಬಯಸುತ್ತೇನೆ ಎಂದರು.

ದೇಶದಲ್ಲಿ ಎನ್‌ಡಿಎ ಸರ್ಕಾರವು ಎರಡು ಅವಧಿಗೆ ಆಡಳಿತ ನಡೆಸಿ, ಮೂರನೇ ಅವಧಿಗೆ ಆಡಳಿತ ನಡೆಸಲು ಸಜ್ಜಾಗಿದೆ. ದೇಶದೆಲ್ಲೆಡೆ ಎನ್‌ಡಿಎಗೆ ಜನರಿಂದ ಉತ್ತಮ ಸ್ಪಂದನೆ, ಬೆಂಬಲ ವ್ಯಕ್ತವಾಗಿದೆ. ಒಡಿಶಾ, ಸಿಕ್ಕಿಂ, ಅರುಣಾಚಲ ಪ್ರದೇಶ, ಆಂಧ್ರಪ್ರದೇಶದಲ್ಲಿ ನಮಗೆ ಭಾರಿ ಬೆಂಬಲ ವ್ಯಕ್ತವಾಗಿದ್ದು, ಕಾಂಗ್ರೆಸ್‌ ಸೋತು ಸುಣ್ಣವಾಗಿದೆ. ಒಡಿಶಾದಲ್ಲಿ ಬಿಜೆಪಿ ಸರ್ಕಾರ ರಚಿಸಲು ಮುಂದಾಗಿದೆ. ಬಿಜೆಪಿಯ ಮುಖ್ಯಮಂತ್ರಿಯು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಲೋಕಸಭೆ ಚುನಾವಣೆಯಲ್ಲೂ ಒಡಿಶಾದಲ್ಲಿ ಹೆಚ್ಚಿನ ಕ್ಷೇತ್ರಗಳು ಸಿಕ್ಕಿವೆ. ಜಗನ್ನಾಥನ ಭೂಮಿಯಲ್ಲಿ ಬಿಜೆಪಿಯ ಮುಖ್ಯಮಂತ್ರಿ ಆಡಳಿತ ನಡೆಸಲಿದೆ ಎಂದು ಮೋದಿ ಹೇಳಿದ್ದಾರೆ.

ಬಿಜೆಪಿ ಕೇರಳದಲ್ಲಿ ಖಾತೆ ತೆರೆದಿದೆ. ನಮ್ಮ ಕೇರಳದ ಕಾರ್ಯಕರ್ತರು ಬಲಿದಾನ ಮಾಡಿದ್ದಾರೆ. ಸಂಘರ್ಷದ ಜೊತೆ ಸೇವೆಯನ್ನೂ ಮಾಡಿದ್ದಾರೆ. ಹಲವು ಪೀಳಿಗೆ ಸತತ ಪರಿಶ್ರಮದಿಂದ ಇಂದು ಕೇರಳದಲ್ಲಿ ಕಮಲ ಅರಳಿದೆ ಎಂದು ಮೋದಿ ಹೇಳಿದ್ದಾರೆ. ತೆಲಂಗಾಣದಲ್ಲಿ ಬಿಜೆಪಿ ಸಂಖ್ಯೆ ದುಪ್ಪಟ್ಟಾಗಿದೆ. ಮಧ್ಯಪ್ರದೇಶ, ಉತ್ತರಾಖಂಡ, ಹಿಮಾಚಲ, ಚತ್ತೀಸಘಡ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದೆ. ಈ ಎಲ್ಲಾ ರಾಜ್ಯ ಹಾಗೂ ವಿಧಾನಸಭಾ ಚುನಾವಣೆಯ ಅರುಣಾಚಲ, ಸಿಕ್ಕಿಂ, ಆಂಧ್ರ ಪ್ರದೇಶ ಜನತೆಗೂ ಮೋದಿ ಧನ್ಯವಾದ ಅರ್ಪಿಸಿದ್ದಾರೆ.

ಆಂಧ್ರ ಪ್ರದೇಶದಲ್ಲಿ ಚಂದ್ರಬಾಬು ನೇತೃತ್ವದಲ್ಲಿ, ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಎನ್‌ಡಿಎ ಉತ್ತಮ ಪ್ರದರ್ಶನ ನೀಡಿದೆ. 10 ವರ್ಷಗಳ ಹಿಂದೆ ಜನರು ಬದಲಾವಣೆಗೆ ಮತ ನೀಡಿದ್ದರು. ಒಂದು ಸಮಯದಲ್ಲಿ ದೇಶ ನಿರಾಶೆಯಲ್ಲಿ ಮುಳುಗಿತ್ತು. ಪ್ರತಿ ದಿನ ಭ್ರಷ್ಟಾಚಾರದಲ್ಲಿ ದೇಶ ಮುಳುಗಿತ್ತು. ಈ ಸಮಯದಲ್ಲಿ ದೇಶವನ್ನ ನಿರಾಶೆಯಿಂದ ಆಶಾವಾದಕ್ಕೆ ಕೊಂಡೊಯ್ದಿದ್ದೇವೆ. ನಾವೆಲ್ಲಾ ಜವಾಬ್ದಾರಿಯಿಂದ ಕೆಲಸ ಮಾಡಿದ್ದೇವೆ. 2019ರಲ್ಲ ನಮಗೆ ಜನರು ಆಶೀರ್ವಾದ ಮಾಡಿದ್ದರು. ಇದೀಗ 3ನೇ ಬಾರಿಗೆ ನಮಗೆ ಜನತೆ ಆಶೀರ್ವಾದ ನೀಡಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ನನ್ನ ತಾಯಿ ಅಗಲಿದ ಬಳಿಕ ಇದು ನನ್ನ ಮೊದಲ ಚುನಾವಣೆಯಾಗಿತ್ತು. ಆದರೆ, ದೇಶದ ಮೂಲೆ ಮೂಲೆಯಲ್ಲಿ, ಕೋಟ್ಯಂತರ ತಾಯಂದಿರು ನನ್ನನ್ನು ಮಗನಂತೆ ಸ್ವೀಕರಿಸಿದರು. ಹೆಣ್ಣುಮಕ್ಕಳು ನನಗೆ ಆಶೀರ್ವಾದ ಮಾಡಿದರು. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆಯರು ದಾಖಲೆ ಸಂಖ್ಯೆಯಲ್ಲಿ ಮತದಾನ ಮಾಡಿದರು. ಇಂತಹ ಅಭೂತಪೂರ್ವ ಬೆಳವಣಿಗೆಯನ್ನು ನಾನು ಎಂದಿಗೂ ಮರೆಯುವುದಿಲ್ಲ. ದೇಶದ ಕೋಟ್ಯಂತರ ಮಾತೆಯರು ನೀಡಿದ ಆಶೀರ್ವಾದ, ಪ್ರೇರಣೆಯು ನನ್ನ ಮನದಲ್ಲಿ ತುಂಬಿದೆ ಎಂದು ಮೋದಿ ಹೇಳಿದರು.

ಲೋಕಸಭೆ ಚುನಾವಣೆ ಫಲಿತಾಂಶದ ಕುರಿತು ಪ್ರತಿಪಕ್ಷಗಳು ಜೋರು ಧ್ವನಿಯಲ್ಲಿ ಮಾತನಾಡುತ್ತಿವೆ. ಆದರೆ, ಕಾಂಗ್ರೆಸ್‌ ಸೇರಿ ಎಲ್ಲ ಪ್ರತಿಪಕ್ಷಗಳಿಗೆ ಗೊತ್ತಿಲ್ಲ, ಬಿಜೆಪಿಯೊಂದೇ ಗಳಿಸಿರುವಷ್ಟು ಸ್ಥಾನಗಳನ್ನು ಎಲ್ಲ ಪ್ರತಿಕ್ಷಗಳು ಒಗ್ಗೂಡಿ ಜಯಿಸಿಲ್ಲ. ಆದರೆ, ಮೂರನೇ ಅವಧಿಯಲ್ಲೂ ಎನ್‌ಡಿಎ ಸರ್ಕಾರವು ಉತ್ತಮ ಆಡಳಿತ ನೀಡಲಿದೆ. ದೇಶದಲ್ಲಿ ಹೊಸ ಅಧ್ಯಾಯ ಸೃಷ್ಟಿಯಾಗಲಿದೆ. ಇದು ನರೇಂದ್ರ ಮೋದಿಯ ಗ್ಯಾರಂಟಿ ಎಂದು ಹೇಳಿದರು.

ತಂತ್ರಜ್ಞಾನ, ರಫ್ತು, ಮೂಲ ಸೌಕರ್ಯ, ಬಾಹ್ಯಾಕಾಶ, ದೇಶದ ರಕ್ಷಣಾ ವ್ಯವಸ್ಥೆ ಸೇರಿ ಸರ್ವ ಕ್ಷೇತ್ರಗಳ ಏಳಿಗೆಗೆ ಶ್ರಮಿಸುತ್ತೇವೆ. ನಮ್ಮ ಯುವಕರಿಗೆ ಶಿಕ್ಷಣ, ಉದ್ಯೋಗ, ಕೌಶಲ ಅಭಿವೃದ್ಧಿ, ರೈತರ ಆದಾಯ ಹೆಚ್ಚಿಸುವುದು, ಕೃಷಿ ಉತ್ಪನ್ನ ಹೆಚ್ಚಿಸುವುದು, ರೈತರು ಆತ್ಮನಿರ್ಭರರಾಗಲು ಏನು ಬೇಕೋ ಎಲ್ಲವನ್ನೂ ಮೂರನೇ ಅವಧಿಯ ಆಡಳಿತದ ವೇಳೆ ಮಾಡಲಿದ್ದೇವೆ ಎಂದು ಭರವಸೆ ನೀಡಿದರು.

ನನ್ನ ಸಹೋದರ, ಸಹೋದರಿಯರೇ, ಇಂದು ಚುನಾವಣಾ ಆಯೋಗಕ್ಕೂ ನಾನು ಅಭಿನಂದನೆ ಸಲ್ಲಿಸುತ್ತೇನೆ. ಚುನಾವಣೆ ಆಯೋಗವು ಜಗತ್ತಿನಲ್ಲೇ ಅತಿ ದೊಡ್ಡ ಚುನಾವಣೆಯನ್ನು ಯಶಸ್ವಿಯಾಗಿ ಕೈಗೊಂಡಿದೆ. ಸುಮಾರು 1 ಕೋಟಿ ಮತದಾರರು, 11 ಲಕ್ಷ ಮತಕೇಂದ್ರಗಳು, 1.5 ಕೋಟಿ ಸಬ್ಬಂದಿ ಸೇರಿ ಎಲ್ಲರೂ ಬೇಸಿಗೆಯ ಬಿಸಿಲಿನಲ್ಲೂ ಕಾರ್ಯನಿರ್ವಹಿಸಿದ್ದಾರೆ. ಇದರಿಂದಲೇ ಚುನಾವಣೆಯು ಯಶಸ್ವಿಯಾಗಿದೆ. ಚುನಾವಣೆ ಆಯೋಗವು ದಕ್ಷತೆಯಿಂದ ಕೆಲಸ ಮಾಡಿದ ಕಾರಣ ಬೃಹತ್‌ ಪ್ರಜಾಪ್ರಭುತ್ವದ ಬೃಹತ್‌ ಚುನಾವಣೆಯು ವಿಶ್ವಾಸಾರ್ಹತೆಯಿಂದ ಮುಗಿದಿದೆ. ಇದರ ಶ್ರೇಯಸ್ಸು ಆಯೋಗಕ್ಕೇ ಸಲ್ಲಬೇಕು ಎಂಬುದಾಗಿ ಮೋದಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!