ಎನ್‌ಡಿಎ ದೇಶಕ್ಕಾಗಿ, ದೇಶದ ಜನರಿಗಾಗಿ, ಸುರಕ್ಷತೆಗಾಗಿ ಸಮರ್ಪಿತ: ಮಿತ್ರ ಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯ ಅಶೋಕ ಹೊಟೇಲ್ ನಲ್ಲಿ ಎನ್‌ಡಿಎ ಮಿತ್ರಕೂಟಗಳ ಸಭೆ ನಡೆಡಿದ್ದು, ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಎನ್‌ಡಿಎ ದೇಶಕ್ಕಾಗಿ , ದೇಶದ ಜನರಿಗಾಗಿ, ಸುರಕ್ಷತೆಗಾಗಿ ಸಮರ್ಪಿತವಾಗಿದೆ. ಎನ್‌ಡಿಎಗೆ ದೇಶ ಮೊದಲು ಎಂದು ಹೇಳಿದ್ದಾರೆ.

ಎನ್‌ಡಿಎ ಆಡಳಿತ ಪಕ್ಷದಲ್ಲಿರಲಿ, ವಿರೋಧ ಪಕ್ಷದಲ್ಲಿರಲಿ ಯಾವತ್ತೂ ಕೆಟ್ಟ ರಾಜಕೀಯ ಮಾಡಿಲ್ಲ. ಸರ್ಕಾರದ ವಿರುದ್ಧ ಮಾತನಾಡಲು ವಿದೇಶಿ ಸಂಸ್ಥೆಗಳ, ವಿದೇಶಗಳ ನೆರವು ಯಾವತ್ತೂ ಕೇಳಿಲ್ಲ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.

ಇಂದು ಎನ್‌ಡಿಎ ಬಲಿಷ್ಠಗೊಳ್ಳಲು ನಮ್ಮನ್ನು ಅಗಲಿದ ಬಾಳಾ ಸಾಹೇಬ್ ಠಾಕ್ರೆ, ಪ್ರಕಾಶ್ ಸಿಂಗ್ ಬಾದಲ್ ಕೂಡ ಕೂಡುಗೆ ನೀಡಿದ್ದಾರೆ. ಈ ಯಾತ್ರೆಯಲ್ಲಿ ನಮಗೆ ಸಾಥ್ ನೀಡಿದ ಎಲ್ಲಾ ಪಕ್ಷಗಳಿಗೆ ಧನ್ಯವಾದ ತಿಳಿಸುತ್ತೇನೆ. ಇದೀಗ ನಮ್ಮ ಎನ್‌ಡಿಎ ಜೊತೆ ಸೇರಿರು ಹೊಸ ಪಕ್ಷಗಳಿಗೆ ಹೃದಯದಿಂದ ಸ್ವಾಗತ ನೀಡುತ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ.

ಎನ್‌ಡಿಎ ರಾಜ್ಯದ ಅಭಿವೃದ್ಧಿ, ರಾಷ್ಟ್ರದ ಅಭಿವೃದ್ಧಿ ಮಂತ್ರದೊಂದಿಗೆ ಸಾಗಿದೆ. ಇಂದು ಕೋಟಿ ಕೋಟಿ ಭಾರತೀಯರು ಹೊಸ ಸಂಕಲ್ಪದೊಂದಿಗೆ ಮುನ್ನುಗ್ಗುತ್ತಿರುವ ಮಹತ್ವದ ಕಾಲಗಟ್ಟದಲ್ಲಿ ಎನ್‌ಡಿಎ ದೇಶವನ್ನು ಹೊಸ ದಿಕ್ಕಿನಲ್ಲಿ ಕೊಂಡೊಯ್ಯಲು ಪ್ರಮುಖ ಭೂಮಿಕೆವಹಿಸುತ್ತಿದೆ. ದಲಿತರು, ದಮನಿತರು, ನಿರ್ಗತಿಗರು, ಬಡವರು ಸೇರಿದಂತೆ ಎಲ್ಲರ ವಿಶ್ವಾಸ ಎನ್‌ಡಿಎ ಮೇಲಿದೆ. ಭಾರತದ ಅಭಿವೃದ್ಧಿಯಲ್ಲಿ ಜನರು ಎನ್‌ಡಿಎ ಮೇಲೆ ಅಪಾರ ಭರವಸೆ ಇಟ್ಟಿದ್ದಾರೆ ಎಂದರು.

ಎನ್‌ಡಿಎ ಎಲ್ಲರ ಪರಿಶ್ರಮ, ಪ್ರಗತಿಯ ಪ್ರತಿನಿಧಿ. ಒಂದು ರಾಷ್ಟ್ರ ಎಲ್ಲರ ಪರಿಶ್ರಮದಿಂದ ಮುನ್ನಡೆಯುತ್ತದೆ. 90ರ ದಶಕದಲ್ಲಿ ಕಾಂಗ್ರೆಸ್ ಮೈತ್ರಿಯ ಕಸರತ್ತು ಆರಂಭಿಸಿತು. ಕಾಂಗ್ರೆಸ್ ಸರ್ಕಾರ ಕೆಡವಲು ಈ ಮೈತ್ರಿಯನ್ನು ಬಳಸಿಕೊಂಡಿದೆ. ಎನ್‌ಡಿಎ ಯಾವತ್ತೂ ಯಾವುದೇ ಪಕ್ಷವನ್ನು ಅಧಿಕಾರದಿಂದ ಕಿತ್ತೆಸೆಯಲು ಪ್ರಯತ್ನಿಸಿಲ್ಲ. ದೇಶದಲ್ಲಿ ಸ್ಥಿರ ಸರ್ಕಾರ ಇದ್ದರೆ, ಅಭಿವೃದ್ಧಿ ವೇಗ ಹೆಚ್ಚಾಗಲಿದೆ ಎಂದು ಮೋದಿ ಹೇಳಿದ್ದಾರೆ.

ಎನ್‌ಡಿಎ ಮೈತ್ರಿ ಕೂಟದಲ್ಲಿ ಯಾವುದೇ ಪಕ್ಷ ದೊಡ್ಡದು, ಚಿಕ್ಕದು ಎಂದಿಲ್ಲ. ಎಲ್ಲಾ ಪಕ್ಷಗಳು ಅತ್ಯಂತ ಮುಖ್ಯ. 2014 ಹಾಗೂ 2019ರಲ್ಲಿ ಬಿಜೆಪಿ ಅತೀ ಹೆಚ್ಚು ಸ್ಥಾನ ಗಳಿಸಿತ್ತು. ಆದರೆ ಈ ಸರ್ಕಾರ ಎನ್‌ಡಿಎ ಸರ್ಕಾರವಾಗಿದೆ. ನಾವು ಯಾವತ್ತೂ ಎನ್‌ಡಿಎ ಬಿಟ್ಟುಕೊಟ್ಟಿಲ್ಲ. ಎನ್‌ಡಿಎದಲ್ಲಿರುವ ಪಕ್ಷಗಳು ಸಮಾಜದ ಎಲ್ಲಾ ವರ್ಗದ ಜನರ ಜೊತೆ ಕೆಲಸ ಮಾಡುತ್ತದೆ ಎಂದರು.

ಇಡೀ ವಿಶ್ವಕ್ಕೆ ಭಾರತದ ಮೇಲೆ ವಿಶ್ವಾಸ ಹೆಚ್ಚಲು ಸ್ಥರ ಹಾಗೂ ಸುಭದ್ರ ಸರ್ಕಾರ ಕಾರಣ . ಎನ್‌ಡಿಎ ಮತ್ತೊಂದು ವಿಶೇಷತೆ ಎಂದರೆ ನಾವು ವಿಪಕ್ಷದಲ್ಲಿದ್ದಾಗ ನಾವು ಸಕಾರಾತ್ಮ ರಾಜನೀತಿ ಮಾಡಿದ್ದೇವೆ. ಯಾವತ್ತೂ ನೆಗೆಟೀವಿಟಿ ರಾಜಕೀಯ ಮಾಡಿಲ್ಲ. ವಿಪಕ್ಷದಲ್ಲಿದ್ದ ನಾವು ಸರ್ಕಾರದ ಹಲವು ಯೋಜನೆಗಳನ್ನು, ಭ್ರಷ್ಟಾಚಾರಗಳನ್ನು ವಿರೋಧಿಸಿದ್ದೇವೆ. ಹಲವು ಅಕ್ರಮಗಳನ್ನು ಬಯಲಿಗೆಳೆದಿದ್ದೇವೆ. ಆದರೆ ನಾವು ಯಾವತ್ತೂ ಸರ್ಕಾರದ ವಿರುದ್ಧ ಧ್ವನಿ ಎತ್ತಲು ವಿದೇಶಗಳ ನೆರವು ಕೇಳಿಲ್ಲ ಎಂದರು.

ಇಂದು ಕೆಲ ರಾಜ್ಯಗಳಲ್ಲಿಕೇಂದ್ರದ ಹಲವು ಯೋಜನೆಗಳಿಗೆ ಸುಗಮವಾಗಿ ಸಾಗುತ್ತಿಲ್ಲ. ಕೆಲ ರಾಜ್ಯದ ಮುಖ್ಯಮಂತ್ರಿಗಳಿಗೆ ಹಲವು ಪತ್ರ ಬರೆದರೂ ಕೇಂದ್ರ ಕೇಳಿದ ಯಾವುದೇ ದಾಖಲೆ ನೀಡಿಲ್ಲ. ಮೈತ್ರಿ ಭ್ರಷ್ಟಾಚಾರದ ಪರವಾಗಿ, ಮೈತ್ರಿ ಪರಿವಾರವಾದ ಪರವಾಗಿದ್ದರೆ ಅಂತಹ ಮೈತ್ರಿ ದೇಶಕ್ಕೆ ಸಂಕಷ್ಟ ನೀಡಲಿದೆ. 2014ರ ಮೊದಲು ಭಾರತದಲ್ಲಿದ್ದ ಮೈತ್ರಿ ಸರ್ಕಾರ ಯಾವ ಆಡಳಿತ ನೀಡಿದೆ ಅನ್ನೋದು ನಾವು ನೋಡಿದ್ದೇವೆ. ಪ್ರಧಾನಿ ಮೇಲೆ ಮತ್ತೊಬ್ಬರಿಗೆ ಅಧಿಕಾರ, ಪವರ್ ಹೌಸ್ ಸೇರಿದಂತೆ ಗೊಂದಲಗಳು ಭಾರತದ ಅಭಿವೃದ್ಧಿಯನ್ನು ಕುಂಠಿತ ಮಾಡಿತ್ತು ಎಂದು ಮೋದಿ ಹೇಳಿದ್ದಾರೆ.

ನೀವು ನೀತಿ ಆಯೋಗದ ಅಧ್ಯಯನ ವರದಿ ನೋಡಿಬರಬಹುದು. ಬಡತನದಿಂದ ಭಾರತೀಯರು ಹೊರಬಂದ ವರದಿ, ಐಎಂಎಫ್ ವರದಿಯಲ್ಲೂ ಇದೇ ರೀತಿ ಉಲ್ಲೇಖ ನೀವು ಗಮನಿಸಿರಬಹುದು. ಬಡವರಿಗೆ ಮನೆ ನೀಡುವ ಯೋಜನೆ, ಅವರನ್ನು ಬಡತನದಿಂದ ಹೊರಬರಲು ಯೋಜನೆ, ಅವರಿಗೆ ಶಕ್ತಿ ನೀಡುವ ಹಲವು ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಬಡವರು ತಮ್ಮ ಕನಸುಗಳ ಬೆನ್ನಟ್ಟಿ ಹೋಗಲು ನೆರವು ನೀಡಿದ್ದೇವೆ ಎಂದು ಮೋದಿ ಹೇಳಿದ್ದಾರೆ.

ಪ್ರಣಬ್ ಮುಖರ್ಜಿ ಜೀವನದ ಉದ್ದಕ್ಕೂ ಕಾಂಗ್ರೆಸ್ ಜೊತೆಗಿದ್ದವರು, ಕಾಂಗ್ರೆಸ್ ನಾಯಕರಾಗಿ ಸೇವೆ ಸಲ್ಲಿಸಿದವರು. ಆದರೆ ಅವರಿಗೆ ಭಾರತ ರತ್ನವನ್ನು ಎನ್‌ಡಿಎ ನೀಡಿದೆ. ಅವರ ಸೇವೆಯನ್ನು ಎನ್‌ಡಿಎ ಗೌರವಿಸಿದೆ. ಶರದ್ ಪವಾರ್, ಮುಲಾಯಂ ಸಿಂಗ್ ಯಾದವ್ ಸೇರಿದಂತೆ ಹಲವು ನಾಯಕರು ಬಿಜೆಪಿ ವಿರುದ್ಧವಿದ್ದಾರೆ. ಆದರೆ ಅವರ ಸೇವೆಯನ್ನು ಪರಿಗಣಿಸಿ ಪದ್ಮ ಪ್ರಶಸ್ತಿಯನ್ನು ನೀಡಲು ಎನ್‌ಡಿಎ ಹಿಂದೇಟು ಹಾಕಿಲ್ಲ ಎಂದು ಮೋದಿ ಎನ್‌ಡಿಎ ಸರಕಾರದ ಸಾಧನೆಗಳನ್ನು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!