May 22, 2026
Friday, May 22, 2026
spot_img

ಹಳೆಯ ಪದ್ಧತಿಯಂತೆಯೇ ನೀಟ್ ಪರೀಕ್ಷೆ ಮುಂದುವರಿಯಲಿ: ಉನ್ನತ ಶಿಕ್ಷಣ ಸಚಿವ ಸುಧಾಕರ್

ಹೊಸದಿಗಂತ ವರದಿ,ಮಂಗಳೂರು:

ಹಳೆಯ ಪದ್ಧತಿಯಂತೆಯೇ ಆಯಾ ರಾಜ್ಯದಲ್ಲಿ ನೀಟ್ ಪರೀಕ್ಷೆಗೆ ಅವಕಾಶ ಕಲ್ಪಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ತನ್ನ ಅಹಂ ಬಿಡಲಿ

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿಯೇ ಪರೀಕ್ಷೆಗೆ ಅವಕಾಶ ಕಲ್ಪಿಸುವ ಮೂಲಕ ಸಿಇಟಿ ಮೂಲಕ ವೈದ್ಯಕೀಯ ಶಿಕ್ಷಣ ಪ್ರವೇಶ ಪಡೆಯುವ ವ್ಯವಸ್ಥೆಯನ್ನು ಮುಂದುವರಿಸುವಂತೆ ಈಗಾಗಲೇ ಸದನದಲ್ಲಿ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಕೇಂದ್ರ ಸರ್ಕಾರ ತನ್ನ ಅಹಂ ಬಿಟ್ಟಿ ನೈಜತೆಯನ್ನು ಒಪ್ಪಿಕೊಂಡು ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕು ಎಂದು ಆಗ್ರಹಿಸಿದರು.

22 ಲಕ್ಷ ವಿದ್ಯಾರ್ಥಿಗಳಿಗೆ ಸಮಸ್ಯೆ

ನೀಟ್ ಪರೀಕ್ಷೆಯಲ್ಲಿ ಆಗಿರುವ ಗೊಂದಲದಿಂದಾಗಿ ಸುಮಾರು 22 ಲಕ್ಷ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಹಳೆಯ ಪದ್ಧತಿಯನ್ನು ಅನುಸರಿಸುವುದರಿಂದ ಟ್ಯೂಷನ್ ಸೆಂಟರ್ ಗಳ ಅವ್ಯವಹಾರಕ್ಕೂ ತಡೆ ಬೀಳಲಿದೆ. ಕೋಚಿಂಗ್ ಸೆಂಟರ್ ಗಳ ಅನಾರೋಗ್ಯಕರ ಸ್ಪರ್ಧೆಯಿಂದಾಗಿಯೇ ಪ್ರಶ್ನೆ ಪತ್ರಿಕೆ ಲೀಕ್ ಆಗುವಂತಹ ಸಮಸ್ಯೆಗಳು ಹೆಚ್ಚಾಗುತ್ತಿವೆ. ತಮ್ಮ ಸಂಸ್ಥೆಯ ವಿದ್ಯಾರ್ಥಿಗಳು ರ್‍ಯಾಂಕ್ ಪಡೆಯಬೇಕು ಎನ್ನುವ ಉದ್ದೇಶದಿಂದ ಈ ಸೆಂಟರ್ ಗಳು ಯಾವುದೇ ಮಟ್ಟಕ್ಕೆ ಇಳಿಯಲು ಸಿದ್ದವಿವೆ. ಇದರಿಂದ ಪಾರದರ್ಶಕ, ಸಮಸ್ಯೆ ರಹಿತ ಪರೀಕ್ಷೆ ನಡೆಸಲು ಅಡ್ಡಿಯಾಗುತ್ತಿದೆ ಎಂದು ಅವರು ಹೇಳಿದರು.

12ನೇ ತರಗತಿಯ ಅಂಕಕ್ಕೆ ಆದ್ಯತೆ ನೀಡಿ

ನೀಟ್ ಅಂಕಗಳಿಗೆ ಹೆಚ್ಚು ಮಾನ್ಯತೆ ನೀಡುವ ಬದಲು 12ನೇ ತರಗತಿಯ ಅಂಕದ ಶೇ.50ನ್ನು ಪರಿಗಣನೆಗೆ ತೆಗೆದುಕೊಳ್ಳುವುದು ಕೂಡಾ ಉತ್ತಮ. ಇಲ್ಲವಾದಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಅಡಿಪಾಯವಾಗಿರುವ ಇಂತಹ ಪರೀಕ್ಷೆಗಳ ಬಗ್ಗೆ ಹೆಚ್ಚಿನ ಗಮನ ಹರಿಸದೆ ಕೇವಲ ನೀಟ್ ಕಡೆಗೆ ಮಾತ್ರ ಗಮನ ಹರಿಸುತ್ತಾರೆ. ಕೇಂದ್ರ ತನ್ನ ತಪ್ಪನ್ನು ಒಪ್ಪಿಕೊಳ್ಳಲು ಇದು ಸರಿಯಾದ ಸಮಯವಾಗಿದೆ ಎಂದವರು ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !