May 18, 2026
Monday, May 18, 2026
spot_img

NEET ಪ್ರತಿಭಟನೆ ಸಭೆಯಲ್ಲಿ ‘ಕೈ’ ಕಾರ್ಯಕರ್ತರ ರಾದ್ಧಾಂತ: ಕೆಪಿಸಿಸಿ ಅಂಗಳದಲ್ಲೇ ನೂಕಾಟ, ತಳ್ಳಾಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶಾದ್ಯಂತ ಸದ್ದು ಮಾಡುತ್ತಿರುವ ನೀಟ್ ಪರೀಕ್ಷೆ ಅಕ್ರಮವನ್ನು ಖಂಡಿಸಿ ಮೇ 21 ರಂದು ಹಮ್ಮಿಕೊಳ್ಳಲಾಗಿರುವ ಬೃಹತ್ ಪ್ರತಿಭಟನೆಯ ಪೂರ್ವಭಾವಿ ಸಭೆಯು ತೀವ್ರ ಹೈಡ್ರಾಮಾಕ್ಕೆ ಸಾಕ್ಷಿಯಾಗಿದೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯು ಯುವ ಕಾಂಗ್ರೆಸ್‌ನ ಎರಡು ಬಣಗಳ ನಡುವಿನ ತಳ್ಳಾಟ, ನೂಕಾಟ ಹಾಗೂ ಹೊಡೆದಾಟದ ರಣರಂಗವಾಗಿ ಮಾರ್ಪಟ್ಟಿದೆ.

ರಾಷ್ಟ್ರೀಯ ಯುವ ಕಾಂಗ್ರೆಸ್ ಹೈಕಮಾಂಡ್ ಆದೇಶದ ಮೇರೆಗೆ, ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷೆಯಾಗಿದ್ದ ದೀಪಿಕಾ ರೆಡ್ಡಿ ಅವರನ್ನು ಇತ್ತೀಚೆಗಷ್ಟೇ ಹುದ್ದೆಯಿಂದ ವಜಾಗೊಳಿಸಲಾಗಿತ್ತು. ಈ ಕ್ರಮದ ವಿರುದ್ಧ ದೀಪಿಕಾ ರೆಡ್ಡಿ ಅವರ ಬೆಂಬಲಿಗರಲ್ಲಿ ತೀವ್ರ ಅಸಮಾಧಾನ ಹೊಗೆಯಾಡುತ್ತಿತ್ತು. ಇಂದು ಕೆಪಿಸಿಸಿ ಕಚೇರಿಯಲ್ಲಿ ಮೇ 21ರ ಪ್ರತಿಭಟನಾ ಸಿದ್ಧತೆಗಾಗಿ ಅಧಿಕೃತ ಸಭೆ ಕರೆಯಲಾಗಿದ್ದಾಗ ಈ ಆಕ್ರೋಶ ದಿಢೀರನೆ ಸ್ಫೋಟಗೊಂಡಿದೆ.

ಸಭೆಯಲ್ಲೇ ಶುರುವಾಯ್ತು ಹೈಡ್ರಾಮಾ!

ಸಭೆ ಆರಂಭವಾಗುತ್ತಿದ್ದಂತೆ ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಮಂಜುನಾಥ ಗೌಡ ಹಾಗೂ ಮಾಜಿ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಅವರ ಬೆಂಬಲಿಗರ ನಡುವೆ ತೀವ್ರ ವಾಕ್ಸಮರ ಆರಂಭವಾಗಿದೆ. ದೀಪಿಕಾ ರೆಡ್ಡಿ ಅವರನ್ನು ಸ್ಥಾನದಿಂದ ಕೈಬಿಟ್ಟಿರುವುದನ್ನು ವಿರೋಧಿಸಿ ಅವರ ಬೆಂಬಲಿಗರು ಸಭೆಯ ಒಳಗೇ ಮಂಜುನಾಥ ಗೌಡ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದರು.

ಇದಕ್ಕೆ ಮಂಜುನಾಥ ಗೌಡ ಬೆಂಬಲಿಗರು ತೀವ್ರ ಪ್ರತಿರೋಧ ಒಡ್ಡಿದ್ದು, ಸಭೆಗೆ ಅಡ್ಡಿಪಡಿಸದಂತೆ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ಕೈಮೀರಿದೆ. ಎರಡೂ ಬಣಗಳ ಕಾರ್ಯಕರ್ತರು ಪರಸ್ಪರ ತಳ್ಳಾಟ, ನೂಕಾಟ ನಡೆಸುತ್ತಾ ಸಭಾಂಗಣದಿಂದ ಹೊರಬಂದಿದ್ದಾರೆ.

ಬೀದಿಗೆ ಬಂದ ಕೈ ಕಾರ್ಯಕರ್ತರ ಜಗಳ

ಗಲಾಟೆ ಜೋರಾಗುತ್ತಿದ್ದಂತೆ ಸ್ಥಳದಲ್ಲಿದ್ದ ಹಿರಿಯ ನಾಯಕರು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರು. ಆದರೆ ಕಾರ್ಯಕರ್ತರು ನಾಯಕರ ಮಾತಿಗೆ ಕ್ಯಾರೆ ಎನ್ನದೆ ಕೆಪಿಸಿಸಿ ಕಚೇರಿಯ ಆವರಣದಲ್ಲೇ ಪರಸ್ಪರ ಕೈಕೈ ಮಿಲಾಯಿಸಿ ಹೊಡೆದಾಟಕ್ಕೆ ಇಳಿದಿದ್ದಾರೆ. ಕೊನೆಗೆ ಹಿರಿಯ ನಾಯಕರು ಮಧ್ಯಪ್ರವೇಶಿಸಿ, ಉಭಯ ಬಣಗಳ ಕಾರ್ಯಕರ್ತರನ್ನು ಸಮಾಧಾನಪಡಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಈ ಘಟನೆಯಿಂದಾಗಿ ಕೆಪಿಸಿಸಿ ಕಚೇರಿ ಆವರಣದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !