ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳು ಕಾಣೆಯಾಗಿವೆ ಎಂಬ ಆರೋಪಗಳ ನಡುವೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ಯಾವುದೇ ದಾಖಲೆಗಳು ನಾಪತ್ತೆಯಾಗಿಲ್ಲ ಎಂದು ಹೇಳಿದೆ. ಆದರೆ ಈ ದಾಖಲೆಗಳ ಒಂದು ಭಾಗ ಸೋನಿಯಾ ಗಾಂಧಿಯವರ ಬಳಿ ಇರುವುದನ್ನು ಸರ್ಕಾರ ಅಧಿಕೃತವಾಗಿ ಒಪ್ಪಿಕೊಂಡಿರುವುದರಿಂದ ರಾಜಕೀಯ ವಲಯದಲ್ಲಿ ಹೊಸ ಚರ್ಚೆ ಆರಂಭವಾಗಿದೆ.
ಇತ್ತೀಚೆಗೆ ಪ್ರಧಾನಮಂತ್ರಿ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯದಿಂದ ನೆಹರು ಅವರ ದಾಖಲೆಗಳು ಕಾಣೆಯಾಗಿವೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಸಂಸತ್ತಿನಲ್ಲಿ ಬಿಜೆಪಿ ಸಂಸದ ಸಂಬಿತ್ ಪಾತ್ರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, 2025ರ ವಾರ್ಷಿಕ ಲೆಕ್ಕಪರಿಶೋಧನೆಯಲ್ಲಿ ಯಾವುದೇ ದಾಖಲೆಗಳು ಕಳೆದುಹೋಗಿರುವುದು ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ 2008ರಲ್ಲಿ ನೆಹರು ಕುಟುಂಬಕ್ಕೆ ಸಂಬಂಧಿಸಿದ ಖಾಸಗಿ ಪತ್ರಗಳು ಮತ್ತು ದಾಖಲೆಗಳ 51 ಪೆಟ್ಟಿಗೆಗಳನ್ನು ಸೋನಿಯಾ ಗಾಂಧಿಯವರಿಗೆ ಹಸ್ತಾಂತರಿಸಲಾಗಿತ್ತು.
ಈ ದಾಖಲೆಗಳನ್ನು ಮರಳಿ ನೀಡುವಂತೆ ಪಿಎಂಎಂಎಲ್ ಹಲವು ಬಾರಿ ಮನವಿ ಮಾಡಿದರೂ ಅವು ಇನ್ನೂ ಹಿಂತಿರುಗಿಸಲಾಗಿಲ್ಲ ಎಂದು ಸಚಿವಾಲಯ ಹೇಳಿದೆ. ಈ ಕುರಿತು ಮಾತನಾಡಿದ ಶೇಖಾವತ್, ನೆಹರು ಅವರ ದಾಖಲೆಗಳು ದೇಶದ ಐತಿಹಾಸಿಕ ಪರಂಪರೆ ಆಗಿದ್ದು, ಖಾಸಗಿ ಸ್ವತ್ತು ಆಗಲು ಸಾಧ್ಯವಿಲ್ಲ ಎಂದು ಹೇಳಿದರು.
ಸರ್ಕಾರದ ಈ ಹೇಳಿಕೆಗೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ದಾಖಲೆಗಳು ಕಾಣೆಯಾಗಿಲ್ಲವೆಂದ ಮೇಲೆ ವಿವಾದವೇ ಏಕೆ ಎಂದು ಪ್ರಶ್ನಿಸಿದೆ. ಈ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ರಾಜಕೀಯ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆ ಇದೆ.

