ಹೊಸದಿಗಂತ ಡಿಜಿಟಲ್ ಡೆಸ್ಕ್:
ನೆರೆಯರಾಷ್ಟ್ರ ನೇಪಾಳದಲ್ಲಿ ಆಗಸ್ಟ್ 26 ರಂದು ಸಂಭವಿಸಿದ ಭೀಕರ ಪ್ರವಾಹದಿಂದ ಅಪಾರ ಪ್ರಮಾಣದ ಸಾವು ನೋವು ಸಂಭವಿಸಿದ್ದು, ಇದರ ಚಿತ್ರಣ ಇನ್ನು ಮುಂದುವರೆದಿದೆ. ಇಂದು (ಶನಿವಾರ) ನೇಪಾಳ ಪೊಲೀಸರು ಬಿಡುಗಡೆ ಮಾಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಇದುವರೆಗೆ ನೆರೆಗೆ ಬಲಿಯಾದವರ ಸಂಖ್ಯೆ 1,344ಕ್ಕೆ ಏರಿಕೆಯಾಗಿದೆ. ಇಡೀ ಹಳ್ಳಿಗಳೇ ಕೊಚ್ಚಿಹೋಗಿದ್ದು, ರಸ್ತೆ, ಸೇತುವೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಸಂಪೂರ್ಣ ಧ್ವಂಸಗೊಂಡಿದೆ ಎಂದು ತಿಳಿಸಿದೆ.

ಇನ್ನು ಪತ್ತೆಯಾಗದ 275 ಭಾರತೀಯರು
ಈ ಭೀಕರ ಜಲಪ್ರಳಯದ ಬಳಿಕ ನೇಪಾಳದಲ್ಲಿ 275 ಭಾರತೀಯ ಪ್ರಜೆಗಳು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಭಾರತ ಸರ್ಕಾರವು ನೇಪಾಳ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ರಕ್ಷಣಾ ಕಾರ್ಯಾಚರಣೆ ತೀವ್ರಗೊಳಿಸಿದೆ. ಈ ನಡುವೇ ಸಮಾಧಾನಕರ ಸಂಗತಿಯೆಂದರೆ, ಇದುವರೆಗೆ 166 ಭಾರತೀಯರನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. ಇತ್ತ ಚೀನಾದಿಂದ ನೇಪಾಳಕ್ಕೆ ಬಂದಿದ್ದ 1,907 ಭಾರತೀಯರು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.

ಸಾಂಕ್ರಾಮಿಕ ರೋಗಗಳ ಭೀತಿ
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಈಗ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ತೀವ್ರವಾಗಿ ಹಾನಿಗೊಳಗಾದ ಬಿದುರ್ ಭಾಗದಲ್ಲಿ ಕುಡಿಯುವ ನೀರಿನ ಮೂಲಗಳು ಕಲುಷಿತಗೊಂಡಿದ್ದು, ಅದರಲ್ಲಿ ಅಪಾಯಕಾರಿ ಇ-ಕೋಲಿ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಸುಮಾರು 1 ಲಕ್ಷ ಜನರಿಗೆ ಕಾಲರಾ ಲಸಿಕೆ ಮತ್ತು 75 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ದಡಾರ ಲಸಿಕೆ ನೀಡಲು ಅಲ್ಲಿನ ಆರೋಗ್ಯ ಇಲಾಖೆ ಸಜ್ಜಾಗಿದೆ.

ಭಾರತದ ಸಂಪೂರ್ಣ ಬೆಂಬಲ
ನೇಪಾಳ ಸೇನೆಯೊಂದಿಗೆ ಸೇರಿ ಭಾರತದ ವಿಶೇಷ ಸುರಂಗ ರಕ್ಷಣಾ ಪಡೆ ಮತ್ತು ವೈದ್ಯಕೀಯ ತಂಡಗಳು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಶೋಧ ಕಾರ್ಯ ನಡೆಸುತ್ತಿವೆ. ಭಾರತದ ರಾಯಭಾರಿ ನವೀನ್ ಶ್ರೀವಾಸ್ತವ ಅವರ ಪ್ರಕಾರ, ಭಾರತವು ಈಗಾಗಲೇ 5 ವಿಶೇಷ ವಿಮಾನಗಳ ಮೂಲಕ ತುರ್ತು ಪರಿಹಾರ ಸಾಮಗ್ರಿಗಳನ್ನು ನೇಪಾಳಕ್ಕೆ ಕಳುಹಿಸಿಕೊಟ್ಟಿದೆ. ನೇಪಾಳದ ಪುನರ್ನಿರ್ಮಾಣಕ್ಕೆ ಭಾರತ ಸಂಪೂರ್ಣ ಬೆಂಬಲ ಘೋಷಿಸಿದೆ.
ಇದನ್ನೂ ಓದಿ:
ಅಂತಾರಾಷ್ಟ್ರೀಯ ನೆರವು
ಅಮೆರಿಕದ ಸಂಸದರು ಕೂಡ ಅಲ್ಲಿನ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಅವರಿಗೆ ಪತ್ರ ಬರೆದಿದ್ದು, ನೇಪಾಳಕ್ಕೆ ಅಮೆರಿಕದ ವಿಪತ್ತು ಸಹಾಯ ರಕ್ಷಣಾ ತಂಡವನ್ನು ಕಳುಹಿಸುವಂತೆ ಹಾಗೂ ಹೆಚ್ಚಿನ ಮಾನವೀಯ ನೆರವು ನೀಡುವಂತೆ ಒತ್ತಾಯಿಸಿದ್ದಾರೆ. ಇತ್ತ ನೇಪಾಳ ಸರ್ಕಾರವು ರಸುವಾ, ನುವಾಕೋಟ್ ಮತ್ತು ಧಾಡಿಂಗ್ ಸೇರಿದಂತೆ ತೀವ್ರ ಸಂಕಷ್ಟಕ್ಕೆ ಸಿಲುಕಿರುವ 15 ಸ್ಥಳೀಯ ಸಂಸ್ಥೆಗಳಿಗೆ ಕೋಟ್ಯಂತರ ರೂಪಾಯಿಗಳ ತುರ್ತು ನಗದು ಪರಿಹಾರವನ್ನು ಬಿಡುಗಡೆ ಮಾಡಿದೆ.



