ನೆದರ್ಲ್ಯಾಂಡ್ಸ್ ಸಂಸದೀಯ ಚುನಾವಣೆ: ಗೆಲುವಿನ ಸನಿಹದಲ್ಲಿ ಗೀರ್ಟ್ ವೈಲ್ಡರ್ಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನೆದರ್ಲ್ಯಾಂಡ್ಸ್ ಸಂಸದೀಯ ಚುನಾವಣೆಯಲ್ಲಿ ಬಲಪಂಥೀಯ,ಇಸ್ಲಾಂ ವಿರೋಧಿ ನಿಲುವು ಹೊಂದಿರುವ ನಾಯಕ ಗೀರ್ಟ್ ವೈಲ್ಡರ್ಸ್ ಭಾರಿ ಗೆಲುವು ಸಾಧಿಸುವತ್ತ ಮುನ್ನಡೆದಿದ್ದಾರೆ.

ಇದು ಎರಡನೇ ಮಹಾಯುದ್ಧದ ನಂತರ ಡಚ್ ರಾಜಕೀಯದಲ್ಲಿ ನಡೆದ ಅತಿದೊಡ್ಡ ರಾಜಕೀಯ ಸ್ಥಿತ್ಯಂತರಗಳಲ್ಲಿ ಒಂದಾಗಿದೆ.
ನೆದರ್ಲ್ಯಾಂಡ್ಸ್​ನ ಸರ್ಕಾರಿ ಮಾಧ್ಯಮ ಎನ್‌ಒಎಸ್ ಪ್ರಕಟಿಸಿದ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ, ವೈಲ್ಡರ್ಸ್ ಪಾರ್ಟಿ ಫಾರ್ ಫ್ರೀಡಂ ಸಂಸತ್ತಿನ 150 ಸ್ಥಾನಗಳನ್ನು ಹೊಂದಿರುವ ಕೆಳಮನೆಯಲ್ಲಿ 35 ಸ್ಥಾನಗಳನ್ನು ಗೆದ್ದಿದೆ. ಇದು ಕಳೆದ ಚುನಾವಣೆಯಲ್ಲಿ ಅವರು ಗೆದ್ದ 17 ಸ್ಥಾನಗಳಿಗಿಂತ ಎರಡು ಪಟ್ಟು ಹೆಚ್ಚಾಗಿದೆ. ಅಂತಿಮ ಅಧಿಕೃತ ಫಲಿತಾಂಶಗಳು ಇನ್ನೊಂದು ದಿನದಲ್ಲಿ ಹೊರ ಬೀಳಬಹುದು.

ಚುನಾವಣೋತ್ತರ ಸಮೀಕ್ಷೆಗೆ ಪ್ರತಿಕ್ರಿಯಿಸಿದ ವೈಲ್ಡರ್ಸ್​, ನಂಬಲು ನನ್ನನ್ನು ನಾನು ಚಿವುಟಿಕೊಂಡು ನೋಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ನೆದರ್ಲ್ಯಾಂಡ್ಸ್ ಯುರೋಪಿಯನ್ ಒಕ್ಕೂಟವನ್ನು ತೊರೆಯುವ ಬಗ್ಗೆ ಜನಾಭಿಪ್ರಾಯ ಸಂಗ್ರಹ ನಡೆಸುವುದು, ಆಶ್ರಯ ಕೋರುವವರನ್ನು ಸ್ವೀಕರಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸುವುದು ಮತ್ತು ಡಚ್ ಗಡಿಗಳಿಂದ ವಲಸೆ ಬರುವವರನ್ನು ಸಂಪೂರ್ಣವಾಗಿ ವಾಪಸ್ ಕಳುಹಿಸುವುದು ವೈಲ್ಡರ್ಸ್ ಅವರ ಚುನಾವಣಾ ಪ್ರಣಾಳಿಕೆಯ ಅಂಶಗಳಾಗಿವೆ.

ಡಚ್ಚರು ಮತ್ತೆ ನಂ.1 ಆಗಲಿದ್ದಾರೆ, ಇಲ್ಲಿನ ಜನ ತಮ್ಮ ದೇಶವನ್ನು ಮರಳಿ ಪಡೆಯಬೇಕು ಎಂದು ಗೀರ್ಟ್ ವೈಲ್ಡರ್ಸ್​ ಹೇಳಿದ್ದಾರೆ. ಆದರೆ ಈ ಹಿಂದೆ ಡೊನಾಲ್ಡ್ ಟ್ರಂಪ್ ಅವರ ಡಚ್ ಆವೃತ್ತಿ ಎಂದು ಹಣೆಪಟ್ಟಿ ಕಟ್ಟಲ್ಪಟ್ಟಿರುವ ವೈಲ್ಡರ್ಸ್​ ಅಧಿಕಾರದ ಚುಕ್ಕಾಣಿ ಹಿಡಿಯುವ ಮೊದಲು ಸಮ್ಮಿಶ್ರ ಸರ್ಕಾರ ರಚನೆಗೆ ಸಾಕಷ್ಟು ಕಸರತ್ತು ನಡೆಸಬೇಕಿದೆ. ದೇಶದ ಮುಖ್ಯ ವಾಹಿನಿಯ ಪಕ್ಷಗಳು ಅವರೊಂದಿಗೆ ಮತ್ತು ಅವರ ಪಕ್ಷದೊಂದಿಗೆ ಕೈಜೋಡಿಸಲು ಹಿಂಜರಿಯುತ್ತಿರುವುದರಿಂದ ಇದು ಅವರಿಗೆ ಸವಾಲಾಗಿದೆ. ಆದರೆ ಅವರ ಗೆಲುವಿನ ಪ್ರಮಾಣ ನೋಡಿದರೆ ಅವರು ನಿರ್ಣಾಯಕ ಸ್ಥಾನದಲ್ಲಿದ್ದಾರೆ ಎಂಬುದು ಕಂಡು ಬರುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!