ನೇತ್ರಾವತಿ ಹಳೆ ಸೇತುವೆ ದುರಸ್ತಿ ಕಾಮಗಾರಿ ಪೂರ್ಣ: ವಾಹನ ಸಂಚಾರ ಶುರು, ಸವಾರರು ಖುಷ್

ಹೊಸದಿಗಂತ ವರದಿ, ಮಂಗಳೂರು:

ಕಳೆದ ಒಂದು ತಿಂಗಳ ಕಾಲ ಬಂದ್ ಆಗಿದ್ದ ಮಂಗಳೂರು- ಕಾಸರಗೋಡು ರಾಷ್ಟ್ರೀಯ ಹೆದ್ದಾರಿಯ ನೇತ್ರಾವತಿ ಹಳೆ ಸೇತುವೆ ದುರಸ್ಥಿ ಕಾಮಗಾರಿ ಸಂಪೂರ್ಣಗೊಂಡಿದ್ದು ಶನಿವಾರದಂದು ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಇದರಿಂದ ತಿಂಗಳ ಕಾಲ ದಿನ ನಿತ್ಯವೂ ಸುಡುವ ಉರಿ‌ಬಿಸಿಲಿಗೆ ಟ್ರಾಫಿಕ್ ಕಿರಿಕಿರಿ ಅನುಭವಿಸುತ್ತಿದ್ದ ವಾಹನಸವಾರರು ಮತ್ತು ಟ್ರಾಫಿಕ್ ಪೊಲೀಸರೀಗ ಫುಲ್ ಖುಷ್ ಆಗಿದ್ದಾರೆ.

ಉಡುಪಿ ಟೋಲ್ ವೇ ಪ್ರೈವೇಟ್ ಲಿ.ಕಂಪನಿಯು ಕಳೆದ ಎ-1 ರಿಂದ ನೇತ್ರಾವತಿ ಹಳೆಯ ಸೇತುವೆಯ ದುರಸ್ಥಿ ಕಾಮಗಾರಿಯನ್ನ ಕೈಗೆತ್ತಿ ಕೊಂಡಿತ್ತು.ಸೇತುವೆಯ ಪಿಲ್ಲರ್ ಗಳ ಬೇರಿಂಗ್ ಶಿಥಿಲಗೊಂಡಿದ್ದು ,ನೂತನ ಬೇರಿಂಗ್ ಅಳವಡಿಕೆ ಕಾಮಗಾರಿಯನ್ನ ನಡೆಸಲಾಗಿತ್ತು. ಸುಮಾರು ಇಪ್ಪತ್ತರಷ್ಟು ನುರಿತ ಕಾರ್ಮಿಕರು ಸೇತುವೆಯ ಕೆಳಭಾಗದಲ್ಲೆ ದುರಸ್ತಿ ಕಾರ್ಯ ನಡೆಸುತ್ತಿದ್ದರು. ಹೊಸ ಬೇರಿಂಗ್ ಅಳವಡಿಸುವಾಗ ಸೇತುವೆ ಕಂಪಿಸದಂತೆ ವಾಹನ ಸಂಚಾರವನ್ನ ನಿಷೇಧಿಸಲಾಗಿತ್ತು.

ಇದರಿಂದ ದಿನನಿತ್ಯವೂ ಹೆದ್ದಾರಿ ಸಂಚಾರ ವ್ಯತ್ಯಯಗೊಳ್ಳುವುದರಿಂದ ರೋಸಿ ಹೋದ ಜನರು ಹೆದ್ದಾರಿ ಪ್ರಾಧಿಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದರು.

ಹೊಸ ಸೇತುವೆಯಲ್ಲಿ ದ್ವಿಮುಖ ಸಂಚಾರಕ್ಕೆ ಅನುವು ಮಾಡಿ ಕೊಡಲಾಗಿತ್ತಾದರೂ,ಸೇತುವೆ ಮಧ್ಯದಲ್ಲಿ ಸಣ್ಣ ಅಪಘಾತಗಳು ಸಂಭವಿಸಿ ವಾಹನಗಳು ಕೆಟ್ಟು ನಿಂತ ಪರಿಣಾಮ ಹೆದ್ದಾರಿಯುದ್ದಕ್ಕೂ ಸಂಚಾರ ಸ್ಥಬ್ಧಗೊಳ್ಳುತ್ತಿತ್ತು. ಇದೀಗ ಕಾಮಗಾರಿ ಮುಗಿದಿದ್ದು ಶನಿವಾರ ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!