ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುಸ್ತಕಗಳಿರಬೇಕಾದ ಕೈಯಲ್ಲಿ ಇದೀಗ ಮೊಬೈಲ್ ಬಂದಿದೆ. ಸ್ನೇಹಿತರ ಬಳಿ ಇರುವ ಲೇಟೆಸ್ಟ್ ಮಾಡೆಲ್ ತಮಗೂ ಬೇಕೆಂದು ಪೋಷಕರ ಬಳಿ ಇಲ್ಲಸಲ್ಲದ ಬೇಡಿಗೆಳನ್ನು ಮಕ್ಕಳು ಇಡುತ್ತಿದ್ದಾರೆ. ಪೋಷಕರು ಫೋನ್ ಕೊಡಿಸೋದಿಲ್ಲ ಎಂದರೆ ಬ್ಲಾಕ್‌ಮೇಲ್ ಮಾಡೋದನ್ನು ಕಲಿತಿದ್ದಾರೆ!
ಇದಕ್ಕೆ ನಿದರ್ಶನದಂತೆ ಹಾಸನದ ಹೊರವಲಯದಲ್ಲಿರುವ ಯಡಿಯೂರು ಗ್ರಾಮದಲ್ಲಿ ತಂದೆ ಫೋನ್ ಕೊಡಿಸಿಲ್ಲ ಎನ್ನುವ ಕ್ಷುಲ್ಲಕ ಕಾರಣಕ್ಕೆ ಏಳನೇ ತರಗತಿಯ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. 13 ವರ್ಷದ ಪ್ರೀತಂ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಬಾಲಕ.
ಚಿತ್ರದುರ್ಗದ ಶ್ರೀನಿವಾಸ ಹಾಗೂ ಗೌರಮ್ಮ ದಂಪತಿಯ ಪುತ್ರ ಪ್ರೀತಂ ಮೊಬೈಲ್ ಬೇಕೆಂದು ಪಟ್ಟು ಹಿಡಿದಿದ್ದ. ಯಡಿಯೂರಿನಲ್ಲಿ ನಿರ್ಮಾಣವಾಗುತ್ತಿದ್ದ ಖಾಸಗಿ ಲೇಔಟ್‌ನಲ್ಲಿ ಕೆಲಸ ಮಾಡೋದಕ್ಕೆ ಬಂದಿದ್ದ ದಂಪತಿಗೆ ಫೋನ್ ಕೊಡಿಸುವಷ್ಟು ಆರ್ಥಿಕ ಶಕ್ತಿ ಇರಲಿಲ್ಲ. ಲೇಔಟ್‌ನ ಶೆಡ್‌ನಲ್ಲಿ ವಾಸವಾಗಿದ್ದ ಕುಟುಂಬ ಪ್ರೀತಂ ಓದಿ ಉತ್ತಮ ಕೆಲಸ ಮಾಡುತ್ತಾನೆ ಎಂದು ಆಸೆ ಇಟ್ಟುಕೊಂಡಿದ್ದರು.
ಹಲವು ದಿನಗಳಿಂದ ತಂದೆಗೆ ಮೊಬೈಲ್ ಕೊಡಿಸುವಂತೆ ಬೇಡಿ ಬೇಸತ್ತಿದ್ದ ಪ್ರೀತಂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಶೆಡ್‌ನಲ್ಲಿಯೇ ನೇಣು ಬಿಗಿದುಕೊಂಡಿದ್ದು, ಪೋಷಕರು ಆಘಾತದಲ್ಲಿದ್ದಾರೆ. ಅಮ್ಮನ ಸೀರೆಯಲ್ಲಿಯೇ ನೇಣು ಬಿಗಿದುಕೊಂಡಿದ್ದ ಮಗನನ್ನು ಕಂಡು ತಾಯಿ ಕರುಳು ಹಿಂಡಿದಂತಾಗಿದೆ.ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಸನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮಕ್ಕಳೇ, ಪೋಕರಿಗೆ ಸಾವಿರಾರು ಸಮಸ್ಯೆ ಇರುತ್ತದೆ. ಆ ಸಾವಿರದಲ್ಲಿ ನಾಲ್ಕು ಸಮಸ್ಯೆಯೂ ನಿಮಗೆ ಕಾಣಿಸದಂತೆ ಜೀವನ ನಡೆಸುತ್ತಿರುತ್ತಾರೆ. ನಿಮ್ಮನ್ನು ಪ್ರೀತಿಯಿಂದ ಬೆಳೆಸುವ ಪೋಷಕರನ್ನು ಕೂಡ ಅರ್ಥಮಾಡಿಕೊಳ್ಳಿ. ನಿಮ್ಮಿಷ್ಟದ ವಸ್ತುವನ್ನು ಕೊಡಿಸೋದಿಲ್ಲ ಎಂದು ಅವರು ಹೇಳುವಾಗ ನಿಮಗೆ ಆದಷ್ಟು ನೋವು ಅವರಿಗೂ ಆಗುತ್ತದೆ ಎನ್ನುವುದು ಗಮನದಲ್ಲಿರಲಿ..



