ಹೊಸದಿಗಂತ ವರದಿ ಧಾರವಾಡ:
‘ಸುಸ್ಥಿರ ಕೃಷಿಗೆ ಸಿರಿಧಾನ್ಯ’ ಘೋಷವಾಕ್ಯದಡಿ ನಡೆದ ಕೃಷಿ ಮೇಳದ ಫಲಪುಷ್ಪ ಪ್ರದರ್ಶನದಲ್ಲಿ ಇಸ್ರೋ ಸಾಧನೆ ಬಿಂಬಿಸುವ ಚಿತ್ತಾರದ ಚಿತ್ರಗಳು ಗಮನ ಸೆಳೆಯುತ್ತಿವೆ. ತಂತ್ರಜ್ಞಾನ ಹಾಗೂ ಸೌಲಭ್ಯಗಳ ಕೊರತೆ ಕಾಲದಲ್ಲಿ ಇಸ್ರೋ ಹೇಗೆ ತನ್ನ ಸಾಧನೆ ಹಾದಿ ಆರಂಭಿಸಿ, ಇದೀಗ ತಂತ್ರಜ್ಞಾನದ ಕಾಲದಲ್ಲಿ ಮಾಡಿದ ಸಾಧನೆ ಚಿತ್ರಗಳು ಅದ್ಭುತವಾಗಿವೆ.
ಇಸ್ರೋ ಸಂಸ್ಥೆ ಹುಟ್ಟಿನಿಂದ ಈವರೆಗೂ ಮಾಡಿದ ಉಡಾವಣೆಗಳು, ಸಂಶೋಧನೆ, ಲ್ಯಾಂಡರ್, ರೋವರ್‌ಗಳ ಚಿತ್ರ ಮಾದರಿಗಳು ವಿದ್ಯಾರ್ಥಿಗಳ ಆಸಕ್ತಿ ಕೆರಳಸುತ್ತಿವೆ. 1970ರಲ್ಲಿ ಹೇಗೆ ಉಡಾವಣೆ ಮಾಡಿತ್ತು ಎಂಬುದರಿಂದ ಹಿಡಿದು 1987ರಲ್ಲಿ ಎಎಸ್‌ಎಲ್‌ವಿ-ಎಂ24, 1993ರಲ್ಲಿ ಪಿಎಸ್‌ಎಲ್ ವಿ-ಸಿ35 ಮಾದರಿಗಳು ಜನಾಕರ್ಷಣೀಯ.
2014ರಲ್ಲಿ ಜಿಎಸ್‌ಎಲ್‌ವಿ-ಎಂಕೆ2, 2017ರಲ್ಲಿ ಜಿಎಸ್‌ಎಲ್‌ವಿ-ಎಂಕೆ3, 2023ರಲ್ಲಿ ಚಂದ್ರಯಾನ-3 ಉಡಾವಣೆ ಮತ್ತು ಆದಿತ್ಯ-ಎಲ್1 ಚಿತ್ರಗಳು ಗಮನ ಸೆಳೆದಿವೆ.
ಶಾಲಾ-ಕಾಲೇಜು ಹಾಗೂ ಜನರಿಗೆ ಚಿತ್ರದಲ್ಲಿ ಉಡಾವಣೆಯ ಮಾಹಿತಿಯೊಂದಿಗೆ ವಿದ್ಯಾರ್ಥಿಗಳು ವಿಶ್ಲೇಷಣೆ ಮಾಡುವ ರೀತಿಯೂ ಅದ್ಭುತವಾಗಿದೆ. ಕೃಷಿಮೇಳದಲ್ಲಿ ಇದೊಂದು ಹೊಸ ಪ್ರಯೋಗವಾಗಿದೆ.