July 22, 2026
Wednesday, July 22, 2026
spot_img

ಸಾಗರ ರಕ್ಷಣೆಗೆ ಹೊಸ ಬಲ : ಕದಂಬ ನೌಕಾನೆಲೆಗೆ ಸೇರ್ಪಡೆಯಾದ ಐಎನ್‌ಎಸ್ ಮಾಲ್ವಣ್

ಹೊಸದಿಗಂತ ವರದಿ ಕಾರವಾರ :

ಭಾರತೀಯ ನೌಕಾಪಡೆಯ ವ್ಯೂಹಾತ್ಮಕ ರಕ್ಷಣೆಯ ಪ್ರಮುಖ ಭಾಗವಾಗಿ ಏಷಿಯಾದ ಆಯಕಟ್ಟಿನ ನೌಕಾನೆಲೆಯಾದ ಐಎನ್ಎಸ್ ಕದಂಬ ನೌಕಾನೆಲೆಯಲ್ಲಿ ಐಎನ್‌ಎಸ್ ಮಾಲ್ವಣ್’ ಯುದ್ಧನೌಕೆಯು ಬುಧವಾರ ಲೋಕಾರ್ಪಣೆಗೊಂಡಿತು.

ಈ ನೌಕೆಯನ್ನು ಮಾಹೆ ವರ್ಗದ ಎರಡನೇ ಆಂಟಿ-ಸಬ್‌ಮರಿನ್ ವಾರ್‌ಫೇರ್ ಶ್ಯಾಲೋ ವಾಟರ್ ಕ್ರಾಫ್ಟ್ (ASW-SWC) ಆಗಿರುವ ಈ ನೌಕೆಯನ್ನು ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಬುಧವಾರ ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸ್ವದೇಶಿ ತಂತ್ರಜ್ಞಾನದಲ್ಲಿ ನಿರ್ಮಾಣಗೊಂಡ ಈ ಯುದ್ಧನೌಕೆಯು ಕರಾವಳಿ ಕಣ್ಗಾವಲು, ಜಲಾಂತರ್ಗಾಮಿ ವಿರೋಧಿ ಕಾರ್ಯಾಚರಣೆ ಹಾಗೂ ಸಮುದ್ರ ಭದ್ರತೆಯನ್ನು ಇನ್ನಷ್ಟು ಬಲಿಷ್ಠಗೊಳಿಸಲಿದೆ. ಜೊತೆಗೆ, ರಾಷ್ಟ್ರೀಯ ಹಿತಾಸಕ್ತಿ ರಕ್ಷಣೆಯಲ್ಲಿ ಮೂರು ಸೇನಾ ಪಡೆಗಳ ಸಮನ್ವಯತೆ ಹೆಚ್ಚಲಿದ್ದು, ಸುರಕ್ಷಿತ ಕಡಲ ವ್ಯಾಪಾರಕ್ಕೆ ಇದು ಪೂರಕವಾಗಲಿದೆ ಎಂದರು.
ಪಶ್ಚಿಮ ನೌಕಾ ಕಮಾಂಡ್‌ನ ವೈಸ್ ಅಡ್ಮಿರಲ್ ಸಂಜಯ್ ವತ್ಸಾಯನ್ ಮಾತನಾಡಿ ಈ ನೌಕೆಯು ಆತ್ಮನಿರ್ಭರ ಭಾರತ ನಿರ್ಮಾಣ ಪರಿಕಲ್ಪನೆ ಅತ್ಯುತ್ತಮ ಉದಾಹರಣೆ ಎಂದರು.

ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ನೌಕೆಯ ಕಮಾಂಡರ್ ಪ್ರವೀಣಕುಮಾರ್ ತಿವಾರಿ, ಕೊಚ್ಚಿ ಶಿಪ್‌ಯಾರ್ಡ್‌ನ ವ್ಯವಸ್ಥಾಪಕ ಜೋಸ್ ವಿಜೆ ಸೇರಿದಂತೆ ನೌಕಾಪಡೆ ಹಾಗೂ ರಕ್ಷಣಾ ಸಚಿವಾಲಯದ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸ್ವದೇಶಿ ನಿರ್ಮಾಣ :
ಕಾರವಾರದ ಐ ಎನ್.ಎಸ್ ಕದಂಬ ನೌಕಾನೆಲೆಯಲ್ಲಿ ಯುದ್ಧನೌಕೆಯೊಂದರ ಲೋಕಾರ್ಪಣೆ ಆಗುತ್ತಿರುವುದು ಇದೇ ಪ್ರಥಮವಾಗಿದೆ. ಕೊಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (CSL) ನಿರ್ಮಿಸಿರುವ ಈ ನೌಕೆಯಲ್ಲಿ ಶೇ. 80ಕ್ಕೂ ಹೆಚ್ಚು ಸ್ವದೇಶಿ ಉಪಕರಣಗಳ ಬಳಕೆಯಾಗಿದೆ. 78.8 ಮೀಟರ್ ಉದ್ದ ಹಾಗೂ 1,150 ಟನ್ ತೂಕ ಹೊಂದಿರುವ ಈ ನೌಕೆಯು 30 ಎಂಎಂ ನೇವಲ್ ಗನ್, ಟಾರ್ಪಿಡೊ ಲಾಂಚರ್‌ಗಳು, ರಾಕೆಟ್ ಲಾಂಚರ್‌ಗಳು, ‘ಅಭಯ್’ ಸೋನಾರ್ ಹಾಗೂ ಬಿಇಎಲ್ ಅಭಿವೃದ್ಧಿಪಡಿಸಿದ ಅತ್ಯಾಧುನಿಕ ಯುದ್ಧ ನಿರ್ವಹಣಾ ವ್ಯವಸ್ಥೆಗಳನ್ನು ಹೊಂದಿದೆ. ಮಹಾರಾಷ್ಟ್ರದ ಐತಿಹಾಸಿಕ ಕರಾವಳಿ ಪಟ್ಟಣ ‘ಮಾಲ್ವಣ್’ ಹೆಸರಿಡಲಾದ ಈ ನೌಕೆಯು ಛತ್ರಪತಿ ಶಿವಾಜಿ ಮಹಾರಾಜರ ಕಡಲ ಪರಂಪರೆಗೆ ಗೌರವ ಸಲ್ಲಿಸುತ್ತದೆ. ನೌಕೆಯ ಚಿಹ್ನೆಯಲ್ಲಿ ಧೈರ್ಯ ಮತ್ತು ಚುರುಕುತನದ ಸಂಕೇತವಾದ ‘ಬಾಘ್ ನಖ್’ (ಹುಲಿಯ ಉಗುರು) ಬಳಸಲಾಗಿದೆ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !