ಹೊಸ ಹುಡುಗಿಯರು ಹರಾಜು ಆಗಬಾರದು: ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ನಟಿ ಸಂಜನಾ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಲಯಾಳಂ ಚಿತ್ರರಂಗದಲ್ಲಿ ‘ಹೇಮಾ ಸಮಿತಿ ವರದಿ’ ಬಹಿರಂಗ ಆದಾಗ ಅನೇಕ ನಟರ ವಿರುದ್ಧ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಬೇರೆ ಬೇರೆ ಭಾಷೆಯ ಚಿತ್ರರಂಗದಲ್ಲೂ ಸೂಕ್ತ ಕ್ರಮಗಳನ್ನು ಕೈಕೊಳ್ಳುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ. ನಟಿ ಸಂಜನಾ ಗಲ್ರಾನಿ ಅವರು ಒಂದಷ್ಟು ಬೇಡಿಕೆಗಳನ್ನು ಇಟ್ಟುಕೊಂಡು ಇಂದು (ಸೆಪ್ಟೆಂಬರ್ 5) ವಿಧಾನಸೌಧಕ್ಕೆ ಬಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ.

ಬಳಿಕ ಮಾತನಾಡಿದ ಅವರು, ‘ಸಂಜನಾ ಗಲ್ರಾನಿ ಫೌಂಡೇಶನ್ ಮೂಲಕ ಇದು ನನ್ನ ಕನಸಾಗಿತ್ತು. ಇದನ್ನು ಯಾವ ರೀತಿ ಹೇಳಬೇಕು ಎಂಬದನ್ನು ನಿರ್ಧರಿಸಲು ನನಗೆ ಇಷ್ಟ ಸಮಯ ಹಿಡಿಯಿತು. ಕನ್ನಡ ಚಿತ್ರರಂಗದಲ್ಲಿ ಸ್ಯಾಂಡಲ್ವುಡ್ ನಟಿಯರ ಸಂಘ ಎಂಬುದು ಇರಬೇಕು. ಅದಕ್ಕೆ ಹಿರಿಯ ನಟಿಯೊಬ್ಬರು ಮುಖ್ಯಸ್ಥೆ ಆಗಿರಬೇಕು. ಇನ್ನೊಬ್ಬರು ನಮ್ಮ ವಯಸ್ಸಿನ ನಟಿ ಕೂಡ ಇರಬೇಕು. ಸರ್ಕಾರದಿಂದ ಒಬ್ಬರು ಮಹಿಳಾ ಸಾಧಕಿ ಕೂಡ ಇದರಲ್ಲಿ ಸೇರ್ಪಡೆಯಾದರೆ ತೂಕ ಇರುತ್ತದೆ ಎಂದು ಹೇಳಿದ್ದಾರೆ.

ಚಿತ್ರರಂಗಕ್ಕೆ ಬರುವ ಹೊಸ ಹುಡುಗಿಯರಿಗೆ ತುಂಬಾ ಅನ್ಯಾಯ ಆಗುತ್ತದೆ. ಅಂಥವರಿಗೆ ಅವರ ಹಕ್ಕುಗಳು ಏನು, ಅಧಿಕಾರ ಏನು, ಅವರು ಏನು ಮಾಡಬೇಕು, ಏನು ಮಾಡಬಾರದು ಎಂಬುದು ಹೇಳಿಕೊಡಲು ಇಲ್ಲಿ ಯಾರೂ ಇಲ್ಲ. ಅಂಥವರಿಗೆ ‘ಸ್ಯಾಂಡಲ್ವುಡ್ ವಿಮೆನ್ ಆರ್ಟಿಸ್ಟ್ ಅಸೋಸಿಯೇಷನ್’ ಮಾರ್ಗದರ್ಶನ ಮಾಡುತ್ತದೆ. ಯಾರಾದರೂ ಹೊಸ ಹೀರೋಯಿನ್ ಬಂದರೆ ಈ ಸಂಘದಲ್ಲಿ ಸದಸ್ಯರಾಗಲಿ. ಸಂಘದ ರೂಲ್ ಬುಕ್ ನೋಡಿ ತಿಳಿದುಕೊಳ್ಳಲಿ ಎಂದು ಸಂಜನಾ ಹೇಳಿದ್ದಾರೆ.

ಹೊಸಬರಿಗೆ ಬರುವ ಅವಕಾಶಗಳನ್ನು ಹೇಗೆ ಪರಿಶೀಲನೆ ಮಾಡಬೇಕು ಎಂಬುದನ್ನು ಕಲಿಯಬೇಕು. ಯಾರೋ ಬಂದು ತಾವು ನಿರ್ಮಾಪಕ ಅಂತಾರೆ. ಅದನ್ನು ಹೊಸ ಹುಡುಗಿಯರು ನಂಬುತ್ತಾರೆ. 6 ತಿಂಗಳು ಆದ ನಂತರ ಇದೆಲ್ಲ ಬರೀ ಬೋಗಸ್ ಎಂಬುದು ಗೊತ್ತಾಗುತ್ತದೆ. ಆ ಆರು ತಿಂಗಳಲ್ಲಿ ಆ ಹೊಸ ಹೆಣ್ಣುಮಕ್ಕಳ ಜೊತೆ ಏನೆಲ್ಲ ನಡೆದುಹೋಗುತ್ತದೆ. ಕ್ಯಾಮೆರಾದಲ್ಲಿ ಅದನ್ನೆಲ್ಲ ಹೇಳೋಕೂ ಆಗಲ್ಲ ಎಂದಿದ್ದಾರೆ.

ನಕಲಿ ಜನರಿಂದ ಕನ್ನಡ ಚಿತ್ರರಂಗದ ಹೆಸರು ಹಾಳಾಗಬಾರದು. ಹೊಸ ಹುಡುಗಿಯರಿಗೆ ಇದನ್ನೆಲ್ಲ ಕಲಿಸುವ ಕೆಲಸ ಈ ಸಂಘ ಮಾಡಬೇಕು. ಈ ಸಂಘವನ್ನು ಶುರುಮಾಡಲು ಅವಕಾಶ ಕೊಡಿ ಎಂದು ಸಿಎಂ ಬಳಿ ಮನವಿ ಮಾಡಿದ್ದೇವೆ. ಸರ್ಕಾರದಿಂದ ಮಾನ್ಯತೆ ಸಿಕ್ಕರೆ ತೂಕ ಬರುತ್ತದೆ. ಫೈರ್ ಸಂಸ್ಥೆ ಉದ್ದೇಶ ಕೂಡ ಚೆನ್ನಾಗಿದೆ. ಸಮಸ್ಯೆ ಬಗೆಹರಿಸಬೇಕು ಎಂಬುದು ನಮ್ಮ ಉದ್ದೇಶ. ಹೊಸ ಹುಡುಗಿಯರು ಹರಾಜು ಆಗಬಾರದು. ತುಂಬ ಜನ ಹೊಸ ಹುಡುಗಿಯರು ಹೆದರಿಕೊಂಡು ಮನೆಗೆ ಹೊರಟು ಹೋಗುತ್ತಾರೆ. ಅಂಥದ್ದು ನಡೆಯದೇ ಇರಲಿ ಎಂಬ ಕಾರಣಕ್ಕೆ ಕಲಾವಿದೆಯರ ಸಂಘ ಬೇಕು ಎಂದಿದ್ದಾರೆ ಸಂಜನಾ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!