February 18, 2026
Wednesday, February 18, 2026
spot_img

ಕುನೋದಲ್ಲಿ ಚಿಗುರಿದ ಹೊಸ ಭರವಸೆ: ‘ಗಾಮಿನಿ’ಯಿಂದ ಮತ್ತೆ ಮೂರು ಮರಿಗಳಿಗೆ ಜನ್ಮ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ‘ಚೀತಾ ಪುನಶ್ಚೇತನ’ ಯೋಜನೆಗೆ ಮತ್ತೊಂದು ಭರ್ಜರಿ ಯಶಸ್ಸು ಸಿಕ್ಕಿದೆ. ಕುನೋ ರಾಷ್ಟ್ರೀಯ ಉದ್ಯಾನವನದ ಹೆಣ್ಣು ಚೀತಾ ‘ಗಾಮಿನಿ’ ಇದೀಗ ಮೂರು ಆರೋಗ್ಯವಂತ ಮರಿಗಳಿಗೆ ಜನ್ಮ ನೀಡುವ ಮೂಲಕ ವನ್ಯಜೀವಿ ಪ್ರೇಮಿಗಳಲ್ಲಿ ಸಂತಸ ಮೂಡಿಸಿದೆ. ವಿಶೇಷವೆಂದರೆ, ಗಾಮಿನಿ ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಐದು ಮರಿಗಳಿಗೆ ಜನ್ಮ ನೀಡಿತ್ತು.

ಈ ಹೊಸ ಅತಿಥಿಗಳ ಆಗಮನದೊಂದಿಗೆ ಕುನೋದಲ್ಲಿರುವ ಒಟ್ಟು ಚೀತಾಗಳ ಸಂಖ್ಯೆ ಈಗ 38ಕ್ಕೆ ಏರಿಕೆಯಾಗಿದೆ. ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರು ಈ ಸಂಭ್ರಮದ ಸುದ್ದಿಯನ್ನು ಸಾಮಾಜಿಕ ಜಾಲತಾಣ ‘X’ ನಲ್ಲಿ ಹಂಚಿಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾದಿಂದ ತರಲಾಗಿದ್ದ ಗಾಮಿನಿ ಇದುವರೆಗೆ ಒಟ್ಟು 8 ಮರಿಗಳಿಗೆ ಜನ್ಮ ನೀಡಿದಂತಾಗಿದೆ. ಆಮದು ಮಾಡಿಕೊಂಡ ನಂತರ ಭಾರತದ ಮಣ್ಣಿನಲ್ಲಿ ಜನಿಸಿದ ಚೀತಾಗಳ ಸಂಖ್ಯೆ ಈಗ 27ಕ್ಕೆ ತಲುಪಿದೆ.

1952ರಲ್ಲಿ ಭಾರತದಲ್ಲಿ ಅಳಿವಿನಂಚಿನಲ್ಲಿದೆ ಎಂದು ಘೋಷಿತವಾಗಿದ್ದ ಚೀತಾಗಳನ್ನು 2022ರಲ್ಲಿ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ತರುವ ಮೂಲಕ ಯೋಜನೆಯನ್ನು ಪುನರಾರಂಭಿಸಲಾಗಿತ್ತು.

ಆರಂಭಿಕ ಹಂತದಲ್ಲಿ ಕೆಲವು ಚೀತಾಗಳು ಮೃತಪಟ್ಟಿದ್ದರೂ, ಈಗ ಚೀತಾಗಳ ಸಂತತಿ ವೇಗವಾಗಿ ಬೆಳೆಯುತ್ತಿರುವುದು ಭಾರತದ ಸಂರಕ್ಷಣಾ ಪ್ರಯತ್ನಗಳಿಗೆ ಸಂದ ಜಯವಾಗಿದೆ. ಕಳೆದ ವರ್ಷವಷ್ಟೇ ಮತ್ತೊಂದು ಚೀತಾ ‘ಮುಖಿ’ ಕೂಡ 5 ಮರಿಗಳಿಗೆ ಜನ್ಮ ನೀಡಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !