ಹೊಸದಿಗಂತ ವರದಿ ಮಂಗಳೂರು:
ಕರಾವಳಿ, ಮಲೆನಾಡು ರಾಜ್ಯದ ವಿವಿಧ ಭಾಗಗಳಲ್ಲಿ ಕೋತಿಗಳ ಕಾಟ ಕೃಷಿಕರಿಗೆ ವಿಪರೀತವಾಗಿದೆ. ತೆಂಗು, ಕಂಗು ಬೆಳೆ ಸೇರಿದಂತೆ ಹೆಚ್ಚಿನ ಎಲ್ಲಾ ಬೆಳೆಗಳನ್ನು ಮಂಗಗಳು ನಾಶ ಮಾಡುತ್ತಿರುವ ಕಾರಣ ಹಲವು ರೈತರು ಹತಾಶರಾಗಿ ಕೃಷಿ ಮಾಡುವುದನ್ನೇ ನಿಲ್ಲಿಸಿದ್ದಾರೆ.
ಕೋತಿಗಳನ್ನು ಓಡಿಸಲು ಏರ್‌ಗನ್ ಸೇರಿದಂತೆ ವಿವಿಧ ತಂತ್ರಗಳನ್ನು ಬಳಸಿ ಮಂಗಗಳ ಉಪಟಳ ತಡೆಯಲು ರೈತರು ಮುಂದಾದರೂ ವಾನರ ಹಾವಳಿಯೇನು ಕಡಿಮೆಯಾಗಿಲ್ಲ. ಈ ನಡುವೆ ಸುಳ್ಯ ಮಂಡೆಕೋಲು ಗ್ರಾಮದ ಬೋಳುಗಲ್ಲಿನ ರೈತ ಶ್ರೀಹರಿ ಸೋಲಾರ್ ಮಂಕಿ ಶಾಕ್ ಪ್ಯಾಡ್ ಸಾಧನ ರೂಪಿಸಿದ್ದು, ರೈತರ ಬೆಳೆ ರಕ್ಷಣೆ ನಿಟ್ಟಿನಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.
ಸತತ ವರ್ಷದ ಪ್ರಯತ್ನ
ಸುಳ್ಯ, ಮಂಡೆಕೋಲು ಸೇರಿದಂತೆ ಕೊಡಗು, ಬೆಳ್ತಂಗಡಿ ಭಾಗಗಳಲ್ಲಿ ಆನೆ ಹಾವಳಿ ಹೆಚ್ಚಿದೆ. ಇದೇ ಕಾರಣದಿಂದ ಶ್ರೀಹರಿ ಅವರು ಕಳೆದ 25 ವರ್ಷಗಳ ಹಿಂದೆಯೇ ತಮ್ಮ ಜಮೀನಿಗೆ ಸೋಲಾರ್‌ಬೇಲಿ ಅಳವಡಿಸಿಕೊಂಡಿದ್ದರು. ಸೋಲಾರ್ ಬೇಲಿಯಿಂದ ಆನೆ ಹಾವಳಿ ನಿಯಂತ್ರಣವಾಯಿತು. ಆದರೆ ಮರದಲ್ಲಿ ಬೆಳೆದು ನಿಂತ ತೆಂಗು ಬೆಳೆಯನ್ನು ಕೋತಿಗಳು ಹಾಳು ಮಾಡತೊಡಗಿದವು. ಇದಕ್ಕೊಂದು ಪರಿಹಾರ ಕಂಡುಕೊಳ್ಳಲೇ ಬೇಕು ಎಂದು
ನಿರ್ಧರಿಸಿದ ಶ್ರೀ ಹರಿ ಅವರು ಸತತ 1 ವರ್ಷ ವಿವಿಧ ಪ್ರಯೋಗ ನಡೆಸಿ ಸೋಲಾರ್ ಮಂಕಿ ಶಾಕ್
ಪ್ಯಾಡ್ ಸಾಧನ ತಯಾರಿಸಿದ್ದಾರೆ.
ತೆಂಗು ಬೆಳೆ ರಕ್ಷಣೆಗೆ ಶಾಕ್ ಪ್ಯಾಡ್ ಬೆಸ್ಟ್
ತೆಂಗು ಬೆಳೆ ರಕ್ಷಣೆಗೆ ಬೇರೆಲ್ಲ ವಿಧಾನಗಳಿಗಿಂತ ಮಂಕಿ ಶಾಕ್ ಪ್ಯಾಡ್ ಪರಿಣಾಮಕಾರಿ ಎಂಬುದನ್ನು ಪ್ರಾಯೋಗಿಕವಾಗಿ ಕಂಡುಕೊಂ ಡಿದ್ದು, ಪ್ರಸ್ತುತ 6 ಮರಗಳಿಗೆ ಮಂಕಿ ಶಾಕ್ ಪ್ಯಾಡ್ ಅಳವಡಿಸಿದ್ದು, ಮಂಗಗಳು ಅತ್ತ ಸುಳಿಯುವುದೇ ಇಲ್ಲ ಎಂಬುದನ್ನು ಶ್ರೀಹರಿ ವಿವರಿಸುತ್ತಾರೆ. ಮುಂದೆ 58 ತೆಂಗಿನ ಮರಗಳಿಗೂ ಮಂಕಿ ಶಾಕ್ ಪ್ಯಾಡ್ ಅಳವಡಿಸಲು ಮುಂದಾಗಿದ್ದಾರೆ. ಈ ವಿಧಾನವನ್ನು ತನ್ನ ತೋಟದ ಎಲ್ಲ ಕಡೆ ವಿಸ್ತರಣೆ ಮಾಡುವ ಚಿಂತನೆ ಅವರಲ್ಲಿದೆ. ಕೋತಿಗಳು ಎಳನೀರು ಹೀರುವಾಗ ಸಾಮಾನ್ಯವಾಗಿ ಮಡಲಿನ ಮೇಲೆ ಕುಳಿತುಕೊಳ್ಳುತ್ತವೆ. ಮಡಲಿಗೆ ಪ್ಯಾಡ್ ಅಳವಡಿಕೆ ಮಾಡಿದಾಗ ಅಲ್ಲಿಯೇ ಶಾಕ್ ಹೊಡೆಯುವ ಕಾರಣ ಮಂಗಗಳು ಮುಂದೆಂದೂ ಅಲ್ಲಿಗೆ ಸುಳಿಯುವುದಿಲ್ಲ.
ವಾಣಿಜ್ಯ ಉದ್ದೇಶ ಇಲ್ಲ
ಬಿಎಸ್‌ಸಿ ಕಾನೂನು ಪದವೀಧರರಾಗಿರುವ ಶ್ರೀಹರಿ ಅವರು ಈ ಸಾಧನವನ್ನು ಬಳಸಿ ವಾಣಿಜ್ಯ ಉದ್ದೇಶವನ್ನು ಬಳಸಿಕೊಳ್ಳುವ ಉದ್ದೇಶ ಹೊಂದಿಲ್ಲ. ಬದಲಿಗೆ ತಮ್ಮಂತೆ ಕೋತಿ ಹಾವಳಿಯಿಂದ ಕೃಷಿಯೇ ಬೇಡವೆಂದು ಸೋತಿರುವ ರೈತರಿಗೆ ಈ ಸಾಧನ ತಯಾರಿ ಬಗ್ಗೆ ಸಲಹೆ ನೀಡಲು ಸಿದ್ಧರಿದ್ದಾರೆ.