ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ನಡುವೆ ಮಹತ್ವದ ಮಾತುಕತೆ ನಡೆಡಿದೆ. ವೆನೆಜುವೆಲಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಂಡು, ಅದನ್ನು ರಿಲಯನ್ಸ್ ಸಂಸ್ಥೆಯು ತನ್ನ ರಿಫೈನರಿಗಳಲ್ಲಿ ಶುದ್ಧೀಕರಿಸುವ ಸಾಮರ್ಥ್ಯವನ್ನು ಹೆಚ್ಚಿಸುವ ಕುರಿತು ಉಭಯ ದೇಶಗಳ ನಡುವೆ ಚರ್ಚೆಗಳು ನಡೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಭಾರತ ಒಂದು ‘ರಿಫೈನಿಂಗ್ ಸೂಪರ್‌ಪವರ್’
ಮುಂಬೈನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾರ್ಕೊ ರೂಬಿಯೋ ಅವರು ಭಾರತವನ್ನು ತೈಲ ಶುದ್ಧೀಕರಣದ ಜಾಗತಿಕ ಸೂಪರ್‌ಪವರ್ ಎಂದು ಶ್ಲಾಘಿಸಿದ್ದಾರೆ. ರಿಲಯನ್ಸ್ ಸಂಸ್ಥೆಯು ಈ ಹಿಂದೆ ವೆನೆಜುವೆಲಾದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದು, ಅಲ್ಲಿನ ಭಾರೀ ಕಚ್ಚಾ ತೈಲವನ್ನು ಶುದ್ಧೀಕರಿಸುವ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.
ತೈಲ ಆಮದು ವೈವಿಧ್ಯೀಕರಣ
ರಷ್ಯಾದಿಂದ ಭಾರತ ತೈಲ ಖರೀದಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ರೂಬಿಯೋ, ಭಾರತವು ತನ್ನ ಇಂಧನ ಮೂಲಗಳನ್ನು ವೈವಿಧ್ಯಗೊಳಿಸಲು ಬಯಸುತ್ತಿರುವುದು ಒಂದು ಉತ್ತಮ ತಂತ್ರವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ನಿಟ್ಟಿನಲ್ಲಿ ವೆನೆಜುವೆಲಾ ಒಂದು ಉತ್ತಮ ಆಯ್ಕೆಯಾಗಲಿದ್ದು, ಅಮೆರಿಕ ಕೂಡ ಭಾರತಕ್ಕೆ ಇಂಧನ ಪೂರೈಸುವ ಪ್ರಮುಖ ಮೂಲವಾಗಲು ಆಸಕ್ತಿ ಹೊಂದಿದೆ ಎಂದು ತಿಳಿಸಿದ್ದಾರೆ.
ಜಾಮ್‌ನಗರ್‌ಗೆ ಭೇಟಿ
ಮಾತುಕತೆಯ ಭಾಗವಾಗಿ ರೂಬಿಯೋ ಅವರು ಬುಧವಾರ ಗುಜರಾತ್‌ನ ಜಾಮ್‌ನಗರ್‌ನಲ್ಲಿರುವ ರಿಲಯನ್ಸ್ ರಿಫೈನರಿಗೆ ಭೇಟಿ ನೀಡಿದ್ದು, ಅಲ್ಲಿ ಅವರು ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರನ್ನು ಭೇಟಿಯಾಗಲಿದ್ದಾರೆ. ಇದಕ್ಕೂ ಮುನ್ನ ಮುಂಬೈನಲ್ಲಿ ಅವರು ಪ್ರಮುಖ ಉದ್ಯಮಿಗಳಾದ ಗೌತಮ್ ಅದಾನಿ ಮತ್ತು ಟಾಟಾ ಗ್ರೂಪ್ ಮುಖ್ಯಸ್ಥ ಎನ್. ಚಂದ್ರಶೇಖರನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.
ವೆನೆಜುವೆಲಾದಲ್ಲಿ ತೈಲ ಉತ್ಪಾದನೆ ಹೆಚ್ಚಾಗುತ್ತಿದ್ದಂತೆ, ಅಲ್ಲಿನ ತೈಲವನ್ನು ಭಾರತದಲ್ಲಿ ಸಂಸ್ಕರಿಸುವ ಪ್ರಕ್ರಿಯೆಗೆ ಚಾಲನೆ ನೀಡಲು ಉಭಯ ಕಡೆಯೂ ಸಕಾರಾತ್ಮಕ ಒಲವು ತೋರಿದ್ದು, ಈ ಕುರಿತಾದ ಮಾತುಕತೆಗಳು ಮುಂದುವರಿಯಲಿವೆ ಎಂದು ರೂಬಿಯೋ ಸ್ಪಷ್ಟಪಡಿಸಿದ್ದಾರೆ.



