ಗೋಮಯ ಉತ್ಪನ್ನಗಳ ಹೊಸ ಆವಿಷ್ಕಾರ!

– ನಿತೀಶ ಡಂಬಳ

ಕಲಾವಿದರ ಸೃಜನಶೀಲತೆಗೆ ಯಾವುದೇ ಚೌಕಟ್ಟಿಲ್ಲ. ಶ್ರೇಷ್ಠ ಕಲಾವಿದರು ನವೀನ ಕಲಾಕೃತಿ, ವಸ್ತುಗಳನ್ನು ರಚಿಸುವಲ್ಲಿ ಸದಾ ತೊಡಗಿರುತ್ತಾರೆ. ಅಂಥಃ ವಿಶಿಷ್ಟ ಕಲೆ ಹಾಗೂ ಸೃಜನಶೀಲತೆ ಫಲವಾಗಿ ಚಿಕ್ಕೋಡಿಯ ಗೋ ಸಂವರ್ಧನ ಅನುಸಂಧಾನ ಕೇಂದ್ರ ಗೋಮಯದಿಂದ (ಸಗಣಿ) ಆಭರಣ, ರಾಖಿ ಸೇರಿದಂತೆ ಹಲವಾರು ಉತ್ಪನ್ನಗಳನ್ನು ತಯಾರಿಸಿ, ಮಾರಾಟ ಮಾಡುತ್ತಿದೆ.
ಅನಿರುದ್ಧ ಹಾಗೂ ಅಪರಾಜಿತ ದಿಂಡೋರೆ ಮೂಲತಃ ಮಹಾರಾಷ್ಟ್ರದ ನಾಸಿಕದವರು. ಸದ್ಯ ಚಿಕ್ಕೋಡಿಯಲ್ಲಿ ನೆಲೆಸಿ ಗೋಮಯ ಉತ್ಪನ್ನಗಳ ತಯಾರಿಕೆ ಹಾಗೂ ಮಾರಾಟದಲ್ಲಿ ತೊಡಗಿಕೊಂಡಿದ್ದಾರೆ. ತೀರ್ಥಹಳ್ಳಿಯ ಸಾವಯವ ಕೃಷಿ ಪರಿವಾರ ಹಾಗೂ ಚಿಕ್ಕೋಡಿಯ ಕೇಶವ ಸ್ಮೃತಿ ಟ್ರಸ್ಟ್ ಜಂಟಿಯಾಗಿ ಚಿಕ್ಕೋಡಿಯಲ್ಲಿ ನಡೆಸುತ್ತಿರುವ ಗೋ ಸಂವರ್ಧನ ಅನುಸಂಧಾನ ಕೇಂದ್ರದಲ್ಲಿ ಗೋಮಯ ಉತ್ಪನ್ನಗಳು ಸಿದ್ಧಗೊಳ್ಳುವುದರ ಜೊತೆಗೆ ಗೋವಿನ ಮಹತ್ವದ ಕುರಿತು ಪ್ರಚಾರ ಕೈಗೊಳ್ಳಲಾಗುತ್ತಿದೆ.

ಗಮನ ಸೆಳೆಯುತ್ತಿವೆ ಗೋಮಯ ಉತ್ಪನ್ನಗಳು:

ಸಗಣಿಯಿಂದ ಬೆರಣಿ ಮಾಡಿ ನಿತ್ಯದ ಉಪಯೋಗ ಹಾಗೂ ಧಾರ್ಮಿಕ ಕಾರ್ಯದಲ್ಲಿ ಬಳಸುವುದನ್ನು ಮಾತ್ರ ನೋಡಿದ್ದೇವೆ. ಆದರೆ ಅದೇ ಸಗಣಿಯಿಂದ ಆಕರ್ಷಕ ಆಭರಣ, ರಾಖಿ, ದೇವರ ಮೂರ್ತಿ, ಪ್ರಣತಿ ಮತ್ತಿತರು ವಸ್ತುಗಳು ತಯಾರಾಗುತ್ತಿರುವುದು ನಿಜಕ್ಕೂ ಕುತೂಹಲಕರ ಸಂಗತಿ. ಪ್ರವೃತ್ತಿಯಿಂದ ಚಿತ್ರ, ಕರಕುಶಲ ಕಲಾವಿದರಾದ ಅಪರಾಜಿತ ದಿಂಡೋರೆ ಅವರು ಆರಂಭದಲ್ಲಿ ಗೋಮಯದಿಂದ ಪ್ರಣತಿ ಮಾಡಲು ಆರಂಭಿಸಿದರು. ವಿವಿಧ ಗ್ರಾಮಗಳಿಂದ ಸಗಣಿ ಸಂಗ್ರಹಿಸಿ, ಅದನ್ನು ಒಣಗಿಸಿ, ಪುಡಿ ಮಾಡಲಾಗುತ್ತದೆ. ಅದರ ಜೊತೆಗೆ ಮೌಲ್ಡಿಂಗ್ (ಅಂಟು) ಸೇರಿಸಿ ಅಚ್ಚುಗಳ ಮೂಲಕ ವಿವಿಧ ಆಕೃತಿಗಳನ್ನು ತಯಾರಿಸಿದರು.

ಕ್ರಮೇಣ ದೀಪಾವಳಿಗೆ ಪ್ರಣತಿ, ರಕ್ಷಾಬಂಧನಕ್ಕೆ ರಾಖಿ, ಗಣೇಶ ಚತುರ್ಥಿಗೆ ಸಣ್ಣ ಸಣ್ಣ ಗಣೇಶ ಮೂರ್ತಿ, ವಾಲ್ ಡೆಕೋರ್ ವಸ್ತುಗಳು, ಓಂ, ಶ್ರೀ, ಸ್ವಸ್ತಿಕ ಶುಭ ಪ್ರತೀಕ ಚಿಹ್ನೆಗಳು ಸಗಣಿಯಿಂದ ತಯಾರಿಸಲ್ಪಟ್ಟವು. ಆದರೆ ಈ ಎಲ್ಲ ವಸ್ತುಗಳು ಸಾಂದರ್ಭಿಕವಾಗಿ ಮಾರಾಟವಾಗುತ್ತಿದ್ದವು. ಸರ್ವಕಾಲಕ್ಕೂ ಖರೀದಿಸಬಲ್ಲ ಉತ್ಪನ್ನಗಳ ಕುರಿತು ಸಂಶೋಧಿಸಿದಾಗ, ಯಾರೂ ಊಹಿಸದ ಸಗಣಿಯಿಂದ ಆಭರಣ ತಯಾರಿಸಬಹುದೆಂದು ಈ ಕೇಂದ್ರ ನಿರೂಪಿಸಿತು. ಅದರಂತೆ ವಿವಿಧ ಮೌಲ್ಡ್ಗಳನ್ನು ರಚಿಸಿ, ನೆಕ್ಲೆಸ್, ಕಿವಿಯೋಲೆ ತಯಾರಿಸಿ ಸೀರೆಗಳಿಗೆ ಹೋಲುವ ಹಾಗೆ ವಿವಿಧ ಬಣ್ಣಗಳನ್ನು ಲೇಪಿಸಿ ಮಾರುಕಟ್ಟೆಗೆ ತರಲಾಯಿತು.

ಗ್ರಾಮೀಣ ಮಹಿಳೆಯರ ಶ್ರಮ:

ಗೋ ಸಂವರ್ಧನ ಅನುಸಂಧಾನ ಕೇಂದ್ರದಲ್ಲಿ ಉತ್ಪಾದನೆಗೊಳ್ಳುವ ಎಲ್ಲ ವಸ್ತುಗಳು ಗ್ರಾಮೀಣ ಭಾಗದ ಮಹಿಳೆಯರಿಂದ ತಯಾರಿಸಲ್ಪಟ್ಟಿವೆ. ಇದರಿಂದ ಅವರಿಗೆ ಉದ್ಯೋಗ ಸೃಷ್ಟಿಯಾಗಿದ್ದು, ಮಹಿಳಾ ಸಬಲೀಕರಣಕ್ಕೆ ಮುನ್ನುಡಿಯಾಗಿದೆ. ಪ್ರತಿವಾರ ಒಂದೆಡೆ ಮಹಿಳೆಯರು ಸೇರಿ ಸತ್ಸಂಗ, ಭಜನೆ, ಸಂಸ್ಕಾರ ಶಿಕ್ಷಣ ಹಾಗೂ ಗೋ ಮಹತ್ವದ ಕುರಿತು ಚರ್ಚಿಸುತ್ತಾರೆ. ಗೋ ಅನುಸಂಧಾನ ಕೇಂದ್ರದ ಧ್ಯೇಯೊದ್ದೇಶ ಮನವರಿಕೆ ಆದವರಿಗೆ ಮಾತ್ರ ಇಲ್ಲಿ ಉದ್ಯೋಗ ನೀಡಲಾಗುತ್ತದೆ. ಮಾರಾಟದಿಂದ ಬಂದ ಬಹುಪಾಲು ಲಾಭಾಂಶ ಮೂಲ ಗ್ರಾಮೀಣ ಮಹಿಳೆಯರಿಗೆ ತಲುಪುವುದು ಉಲ್ಲೇಖನಿಯ.

ಸದ್ಯ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಗೆ ಈ ಉತ್ಪನ್ನಗಳು ರಫ್ತಾಗುತ್ತಿವೆ. ಬೆಳಗಾವಿಯ ಸೇವಾಕಾರ್ಟ್ ವೆಬ್ಸೈಟ್ ಮೂಲಕ ಈ ಗೋಮಯ ಉತ್ಪನ್ನಗಳನ್ನು ಗ್ರಾಹಕರು ನೇರ ಮನೆಗೆ ತರೆಸಿಕೊಳ್ಳಬಹುದು.
ಈ ಕುರಿತ ವಿಡಿಯೊವನ್ನು ನೀವಿಲ್ಲಿ ವೀಕ್ಷಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!