February 3, 2026
Tuesday, February 3, 2026
spot_img

ಕ್ರಿಕೆಟ್ ಲೋಕದಲ್ಲಿ ಹೊಸ ಕಾನೂನು: ಬೌಲರ್‌ಗಳಿಗೆ ವಿಕೆಟ್ ಬೇಟೆಗೆ ಮತ್ತೊಂದು ಚಾನ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರಿಕೆಟ್ ಲೋಕದ ಸಂವಿಧಾನ ಎಂದೇ ಕರೆಯಲ್ಪಡುವ ಮೇರಿಲ್‌ಬೋನ್ ಕ್ರಿಕೆಟ್ ಕ್ಲಬ್, 2026ರ ಸಾಲಿಗೆ ಆಟದಲ್ಲಿ ಪಾರದರ್ಶಕತೆ ಮತ್ತು ರೋಚಕತೆಯನ್ನು ತರುವ ನಿಟ್ಟಿನಲ್ಲಿ ಮಹತ್ವದ ಬದಲಾವಣೆಗಳನ್ನು ಘೋಷಿಸಿದೆ. ಮುಖ್ಯವಾಗಿ ಟೆಸ್ಟ್ ಕ್ರಿಕೆಟ್‌ನ ಸಂಪ್ರದಾಯ ಹಾಗೂ ಮಹಿಳಾ ಮತ್ತು ಜೂನಿಯರ್ ಕ್ರಿಕೆಟ್‌ನ ಪರಿಕರಗಳಲ್ಲಿ ಈ ಬದಲಾವಣೆಗಳನ್ನು ಮಾಡಲಾಗಿದ್ದು, ಇದು ಆಟದ ಸ್ವರೂಪವನ್ನೇ ಬದಲಿಸುವ ಸಾಧ್ಯತೆ ಇದೆ.

ಇಲ್ಲಿಯವರೆಗೆ ಟೆಸ್ಟ್ ಪಂದ್ಯದಲ್ಲಿ ದಿನದ ಕೊನೆಯ ಓವರ್‌ನಲ್ಲಿ ವಿಕೆಟ್ ಬಿದ್ದರೆ ಆ ದಿನದ ಆಟವನ್ನು ಅಲ್ಲಿಗೇ ಮುಕ್ತಾಯಗೊಳಿಸಲಾಗುತ್ತಿತ್ತು. ಇದರಿಂದ ಬ್ಯಾಟಿಂಗ್ ತಂಡಕ್ಕೆ ಮರುದಿನ ಹೊಸ ತಂತ್ರದೊಂದಿಗೆ ಬರಲು ಅವಕಾಶ ಸಿಗುತ್ತಿತ್ತು. ಆದರೆ, ಹೊಸ ಎಂಸಿಸಿ ಕಾನೂನು 12.5.2 ರ ಪ್ರಕಾರ, ಇನ್ನು ಮುಂದೆ ಕೊನೆಯ ಓವರ್‌ನಲ್ಲಿ ವಿಕೆಟ್ ಬಿದ್ದರೂ ಓವರ್ ಪೂರ್ಣಗೊಳಿಸುವುದು ಕಡ್ಡಾಯ. ಅಂದರೆ, ಹೊಸ ಬ್ಯಾಟರ್ ಕೂಡಲೇ ಕ್ರೀಸ್‌ಗೆ ಬಂದು ಆ ಓವರ್‌ನ ಬಾಕಿ ಎಸೆತಗಳನ್ನು ಎದುರಿಸಬೇಕಾಗುತ್ತದೆ. ಇದು ಬೌಲಿಂಗ್ ತಂಡಕ್ಕೆ ಮತ್ತೊಂದು ವಿಕೆಟ್ ಪಡೆಯುವ ಸುವರ್ಣ ಅವಕಾಶವನ್ನು ಕಲ್ಪಿಸುತ್ತದೆ.

ಇದನ್ನೂ ಓದಿ:

ಮಹಿಳಾ ಕ್ರಿಕೆಟ್‌ನಲ್ಲಿ ಬ್ಯಾಟರ್‌ಗಳು ದೊಡ್ಡ ಹೊಡೆತಗಳನ್ನು ಹೊಡೆಯಲು ಮತ್ತು ಬೌಲರ್‌ಗಳು ಹೆಚ್ಚಿನ ವೇಗ ಸಾಧಿಸಲು ಅನುಕೂಲವಾಗುವಂತೆ ಚೆಂಡಿನ ಗಾತ್ರ ಮತ್ತು ತೂಕವನ್ನು ಇಳಿಸಲಾಗಿದೆ.

ಹೊಸ ತೂಕ: 140 ರಿಂದ 149 ಗ್ರಾಂ (ಈ ಹಿಂದೆ 151 ಗ್ರಾಂ ವರೆಗೆ ಇತ್ತು).

ಗಾತ್ರ: 21.5 ರಿಂದ 22 ಸೆಂಟಿಮೀಟರ್‌ಗಳಿಗೆ ನಿಗದಿಪಡಿಸಲಾಗಿದೆ.

13 ವರ್ಷದೊಳಗಿನ ಜೂನಿಯರ್ ಕ್ರಿಕೆಟ್ ಆಟಗಾರರು ಹಿರಿಯರ ಹಂತಕ್ಕೆ ತಲುಪಿದಾಗ ಹೊಂದಿಕೊಳ್ಳಲು ಸುಲಭವಾಗಲೆಂದು ಚೆಂಡಿನ ತೂಕವನ್ನು 140-144 ಗ್ರಾಂ ಮತ್ತು ಗಾತ್ರವನ್ನು 20.5 ರಿಂದ 21 ಸೆಂಟಿಮೀಟರ್‌ಗಳಿಗೆ ಬದಲಾಯಿಸಲಾಗಿದೆ. ಇದರಿಂದ ಉದಯೋನ್ಮುಖ ಆಟಗಾರರು ಸರಿಯಾದ ತೂಕದ ಚೆಂಡಿನೊಂದಿಗೆ ವೃತ್ತಿಪರ ಅಭ್ಯಾಸ ಮಾಡಲು ಸಾಧ್ಯವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !