ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿದ ಸಚಿವ ಸಂಪುಟ ವಿಸ್ತರಣೆಗೆ ಮಹೂರ್ತ ನಿಗದಿಯಾಗಿದ್ದು, ಇಂದು ಸಂಜೆ ನಾಲ್ಕು ಗಂಟೆಗೆ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಕಳೆದ ಕೆಲವು ದಿನಗಳಿಂದ ಸಚಿವ ಸಂಪುಟ ವಿಸ್ತರಣೆ ಕಸರತ್ತು ಜಾರಿಯಲ್ಲಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಿಎಂ ಡಿ.ಕೆ. ಶಿವಕುಮಾರ್ ದೆಹಲಿ ಮಟ್ಟದ ಸರಣಿ ಸಭೆಯಲ್ಲಿ ಭಾಗಿಯಾಗಿದ್ದು, ರಾಜಕೀಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಇದೀಗ ಹೈಕಮಾಂಡ್ ಪಟ್ಟಿಯನ್ನು ಫೈನಲ್ ಮಾಡಿದ್ದು, ನೂತನ ಸಚಿವರು ಇಂದು ಲೋಕಸಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದಾದ ನಂತರದಲ್ಲಿ ಯಾವ ಸಚಿವರಿಗೆ ಯಾವ ಖಾತೆ ಎನ್ನುವ ಚರ್ಚೆ ಆರಂಭವಾಗಲಿದೆ.
ಇಂದು ಪ್ರಮಾಣವಚನ ಸ್ವೀಕರಿಸಲಿರುವ ಸಚಿವ ಪಟ್ಟಿ ಇಂತಿದೆ..
ಪಿಎಂ ನಾರಾಯಣ ಸ್ವಾಮಿ
ಶಿವರಾಜ್ ತಂಗಡಗಿ
ರುದ್ರಪ್ಪ ಲಮಾಣಿ
ಟಿ. ರಘುಮೂರ್ತಿ
ಬಿ ನಾಗೇಂದ್ರ
ಜಮೀರ್
ರಿಜ್ವಾನ್ ಅರ್ಷದ್
ಸಂತೋಷ್ ಲಾಡ್
ಮಧು ಬಂಗಾರಪ್ಪ
ಪುಟ್ಟರಂಗ ಶೆಟ್ಟಿ
ಮಂಕಾಳ್ ವೈದ್ಯ
ಅಜಯ್ ಸಿಂಗ್
ಚೆಲುವರಾಯಸ್ವಾಮಿ
ಎಂ ಶಿವಲಿಂಗೇಗೌಡ
ಹೆಚ್ ಸಿ ಬಾಲಕೃಷ್ಣ
ಶಾಂತವೀರೇಗೌಡ
ವಿಜಯಾನಂದ ಕಾಶಪ್ಪನವರ್
ಲಕ್ಷ್ಮಣ್ ಸವದಿ
ಬಸವರಾಜ್ ರಾಯರೆಡ್ಡಿ
ಶಿವರಾಜ್ ತಂಗಡಗಿಗೆ ಸಿಹಿ ತಿನ್ನಿಸಿದ ಕಾರ್ಯಕರ್ತರು

ಈಗಾಗಲೇ ಸಂಪುಟದಲ್ಲಿ ಯಾರಿಗೆಲ್ಲಾ ಸ್ಥಾನ ಸಿಕ್ಕಿದೆ ಎನ್ನುವ ಪಟ್ಟಿ ಬಿಡುಗಡೆಯಾಗಿದ್ದು, ನೂತನ ಸಚಿವರ ಕ್ಷೇತ್ರದಲ್ಲಿ ಸಂಭ್ರಮಾಚರಣೆ ಜೋರಾಗಿದೆ. ಕೊಪ್ಪಳದಲ್ಲಿ ಮೂರು ಬಾರಿ ಶಾಸಕರಾಗಿ ಆಯ್ಕೆ ಯಾದ ಕನಕಗಿರಿ ಕ್ಷೇತ್ರದ ಶಿವರಾಜ್ ತಂಗಡಗಿ ಅವರಿಗೆ ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಸ್ಥಾನ ಸಿಕ್ಕಿದ್ದು, ಕಾರ್ಯಕರ್ತರು ಶಿವರಾಜ್ ತಂಗಡಗಿ ಅವರಿಗೆ ಸಹಿ ತಿನಿಸಿ, ಸಂಭ್ರಮಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗಕ್ಕೆ ಮತ್ತೊಂದು ಪ್ರಾತಿನಿಧ್ಯ

ಜೇವರ್ಗಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ. ಅಜಯ್ ಧರ್ಮಸಿಂಗ್ ಅವರಿಗೆ ಸಚಿವ ಸ್ಥಾನ ದೊರೆತಿದ್ದು, ಕಲ್ಯಾಣ ಕರ್ನಾಟಕ ಭಾಗಕ್ಕೆ ಮತ್ತೊಂದು ಪ್ರಾತಿನಿಧ್ಯ ದೊರೆತಂತಾಗಿದೆ. ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಪುತ್ರರಾಗಿರುವ ಅಜಯ್ ಸಿಂಗ್, 2013ರಿಂದ ಜೇವರ್ಗಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಸತತ ಮೂರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಯುವ ಕಾಂಗ್ರೆಸ್‌ನಿಂದ ರಾಜಕೀಯ ಜೀವನ ಆರಂಭಿಸಿದ ಅವರು, ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿ ರಾಜ್ಯ ಮಟ್ಟದ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.
ಅಜಯ್ ಸಿಂಗ್ ಅವರು ಈ ಹಿಂದೆ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿ ಕಾರ್ಯನಿರ್ವಹಿಸಿದ್ದು, ಪ್ರಸ್ತುತ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ (ಕೆಕೆಆರ್‌ಡಿಬಿ) ಅಧ್ಯಕ್ಷರಾಗಿದ್ದಾರೆ. ಪ್ರದೇಶದ ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಿರುವ ಹಿನ್ನೆಲೆಯಲ್ಲಿ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಶಾಸಕ ಅಜಯ್ ಸಿಂಗ್ ಸಚಿವರಾಗಲಿದ್ದಾರೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆಯೇ ಜೇವರ್ಗಿ ಕ್ಷೇತ್ರ ಸೇರಿದಂತೆ ಕಲಬುರಗಿ ಜಿಲ್ಲಾದ್ಯಂತ ಅವರ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದು, ಹರ್ಷದ ಅಲೆ ಮುಗಿಲು ಮುಟ್ಟಿದೆ.
ಪಕ್ಷನಿಷ್ಠೆ ಪ್ರದರ್ಶಿಸಿದ್ದ ನಾಗೇಂದ್ರಗೆ ಸಚಿವ ಸ್ಥಾನ

ಸಿಎಂ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ನೂತನ ಸರ್ಕಾರದ ಸಂಪುಟದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ಸಚಿವ ಸ್ಥಾನ ದೊರೆತಿದ್ದು, ಬೆಂಬಲಿಗರು, ಅಭಿಮಾನಿಗಳು, ಕಾರ್ಯಕರ್ತರಲ್ಲಿ ಸಂತಸ ಸಂಭ್ರಮ ಮನೆ ಮಾಡಿದೆ. ಮಾಜಿ ಸಿ.ಎಂ.ಸಿ.ಎಂ.ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಿದ್ದ ಬಿ.ನಾಗೇಂದ್ರ ಅವರು, ನಾನಾ ಆರೋಪಗಳು ಕೇಳಿ ಬಂದ ಹಿನ್ನೆಲೆ ವರಿಷ್ಠರ ಸೂಚನೆಯಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಪಕ್ಷ ನಿಷ್ಠೆ ಪ್ರದರ್ಶಿಸಿದ್ದರು. ಮತ್ತೆ ನೂತನ ಸಿಎಂ ಡಿಕೆ ಶಿವಕುಮಾರ್ ಅವರ ನೇತೃತ್ವದ ಸರ್ಕಾರದಲ್ಲಿ ಸಚಿವ ಸ್ಥಾನ ದೊರೆತಿದ್ದು, ಅವರ ಅಪಾರ ಬೆಂಬಲಿಗರು, ಅಭಿಮಾನಿಗಳು ಹಾಗೂ ಕಾರ್ಯಕರ್ತರ ಸಂತಸ, ಸಂಭ್ರಮ, ಮುಗಿಲು ಮುಟ್ಟಿದೆ. ಬಳ್ಳಾರಿ ನಗರ ಜಿಲ್ಲಾ ಕಾರ್ಯಾಧ್ಯಕ್ಷ ವಿಷ್ಣುವರ್ಧನ್ ಬೋಯಾಪಾಟೆ, ಡಿಸಿಸಿ ಅಧ್ಯಕ್ಷ ಅಲ್ಲಂ ಪ್ರಶಾಂತ್, ಬುಡಾ ಅಧ್ಯಕ್ಷ ಜೆ.ಎಸ್.ಆಂಜನೇಯಲೂ, ಪಾಲಿಕೆ ಮೇಯರ್ ಪಿ.ಗಾದೆಪ್ಪ ಸೇರಿದಂತೆ ಅನೇಕ ನಾಯಕರು ಬಿ.ನಾಗೇಂದ್ರ ಅವರಿಗೆ ಶುಭ ಹಾರೈಸಿದ್ದಾರೆ.



