ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೋಮನಾಥ ದೇವಸ್ಥಾನ ಹಾಗೂ ಬಿಜೆಪಿ ಕಚೇರಿಗಳನ್ನು ಗುರಿಯಾಗಿಸಿಕೊಂಡು ಬಾಂಬ್ ಬೆದರಿಕೆಯ ಇ-ಮೇಲ್ ಬಂದಿರುವ ಹಿನ್ನೆಲೆಯಲ್ಲಿ ಗುಜರಾತ್‌ನಲ್ಲಿ ಭದ್ರತಾ ವ್ಯವಸ್ಥೆ ಬಿಗಿಗೊಳಿಸಲಾಗಿದೆ.
ಸೋಮನಾಥ ದೇಗುಲ, ಬಿಜೆಪಿ ಕೇಂದ್ರ ಕಚೇರಿ ಮತ್ತು ಅಹಮದಾಬಾದ್‌ನ ಖಾನ್‌ಪುರದಲ್ಲಿರುವ ಪಕ್ಷದ ಕಚೇರಿ ಸೇರಿದಂತೆ ಹಲವು ಸೂಕ್ಷ್ಮ ಸ್ಥಳಗಳನ್ನು ಉಲ್ಲೇಖಿಸಿರುವ ಈ ಸಂದೇಶದ ಬೆನ್ನಲ್ಲೇ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳಗಳು ಮುನ್ನೆಚ್ಚರಿಕಾ ಕ್ರಮವಾಗಿ ತಪಾಸಣೆ ಶುರುಹಚ್ಚಿಕೊಂಡಿವೆ.
ಗುಜರಾತ್ ಮುಖ್ಯಮಂತ್ರಿ ಕುರಿತು ಉಲ್ಲೇಖ
ಬೆದರಿಕೆ ಮೇಲ್‌ನಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಪೊಲೀಸ್ ಸಿಬ್ಬಂದಿ ಹಾಗೂ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ (RAW) ಕುರಿತೂ ಬೆದರಿಕೆಯ ಉಲ್ಲೇಖವಿದೆ ಎಂದು ತಿಳಿದುಬಂದಿದೆ. ಸಂದೇಶದಲ್ಲಿ ವಿವಿಧ ಸ್ಥಳಗಳಲ್ಲಿ ಸ್ಫೋಟಕಗಳನ್ನು ಈಗಾಗಲೇ ಇರಿಸಲಾಗಿದೆ ಎಂಬುದಾಗಿ ಕಳುಹಿಸಿದವರು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ತುರ್ತು ಭದ್ರತಾ ತಪಾಸಣೆ
ಮೇಲ್ ಬೆನ್ನಲ್ಲೇ ಅಹಮದಾಬಾದ್‌ನ ಖಾನ್‌ಪುರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ತಪಾಸಣೆ ನಡೆಸಲಾಗಿದೆ. ಅಹಮದಾಬಾದ್ ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ, ನಗರ ಪೊಲೀಸರು ಹಾಗೂ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ಕೈಗೊಂಡಿದ್ದಾರೆ. ಮೇಲ್‌ನಲ್ಲಿ ಉಲ್ಲೇಖವಾಗಿರುವ ಇತರ ಸ್ಥಳಗಳಲ್ಲೂ ಭದ್ರತಾ ತಪಾಸಣೆ ಆರಂಭಿಸಲಾಗಿದೆ.
ಇದನ್ನೂ ಓದಿ:
ಇತ್ತೀಚಿನ ವಾರಗಳಲ್ಲೂ ಗುಜರಾತ್‌ನ ವಿಧಾನಸಭೆ, ನ್ಯಾಯಾಲಯಗಳು ಹಾಗೂ ಶಾಲೆಗಳಿಗೆ ಬಾಂಬ್ ಬೆದರಿಕೆ ಮೇಲ್‌ಗಳು ಬಂದಿದ್ದವು. ಆ ಸಂದರ್ಭದಲ್ಲೂ ಭದ್ರತಾ ತಪಾಸಣೆ ನಡೆಸಲಾಗಿತ್ತು. ಮತ್ತೊಂದೆಡೆ, ಇಂತಹ ಬೆದರಿಕೆ ಮೇಲ್‌ಗಳನ್ನು ಕಳುಹಿಸುತ್ತಿದ್ದ ಆರೋಪದ ಮೇಲೆ ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದರು ಎಂದು ತಿಳಿದುಬಂದಿದೆ.
ಅನುಮಾನಾಸ್ಪದ ವಸ್ತು ಕಂಡುಬಂದ್ರೆ ಮಾಹಿತಿ ಕೊಡಿ
ಹೀಗಾಗಿ, ಹೊಸ ಬೆದರಿಕೆ ಮೇಲ್ ಪ್ರಕರಣವನ್ನು ಹಿಂದಿನ ಘಟನೆಗಳೊಂದಿಗೆ ಸಂಪರ್ಕಿಸಿ ತನಿಖೆ ನಡೆಸಲಾಗುತ್ತಿದ್ದು, ಯಾವುದೇ ಅನುಮಾನಾಸ್ಪದ ವಸ್ತು ಅಥವಾ ಚಟುವಟಿಕೆ ಕಂಡುಬಂದರೆ ತಕ್ಷಣ ಮಾಹಿತಿ ನೀಡುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಸೂಚಿಸಿದ್ದಾರೆ.



