August 13, 2026
Thursday, August 13, 2026
spot_img

ಏರ್ ಇಂಡಿಯಾದಲ್ಲಿ ಹೊಸ ರೂಲ್ಸ್: ಎಲ್ಲಾ ಪೈಲಟ್‌ಗಳಿಗೆ ಡೋಪ್ ಟೆಸ್ಟ್ ಕಡ್ಡಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏರ್ ಇಂಡಿಯಾ ವಿಮಾನದಲ್ಲಿ ಪೈಲಟ್‌ ಒಬ್ಬರು ಡ್ರಗ್ ಟೆಸ್ಟ್‌ನಲ್ಲಿ ಗಾಂಜಾ ಸೇವನೆ ಪಾಸಿಟಿವ್ ಬಂದಿರುವ ವಿವಾದದ ಬೆನ್ನಲ್ಲೇ, ಸಂಸ್ಥೆ ತನ್ನ ಎಲ್ಲಾ ಪೈಲಟ್‌ಗಳಿಗೆ ಹೊಸದಾಗಿ ಕಡ್ಡಾಯ ಡೋಪ್ ಟೆಸ್ಟ್ ನಡೆಸಲು ನಿರ್ಧರಿಸಿದೆ. ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಎರಡೂ ಸಂಸ್ಥೆಗಳ ಪೈಲಟ್‌ಗಳು ಈ ಪರೀಕ್ಷೆಗೆ ಒಳಗಾಗಲಿದ್ದಾರೆ.

ಎಲ್ಲಾ ಪೈಲಟ್‌ಗಳಿಗೂ ಡೋಪ್ ಟೆಸ್ಟ್

ಏರ್ ಇಂಡಿಯಾ ಹೊರಡಿಸಿರುವ ಸೂಚನೆಯ ಪ್ರಕಾರ, ಪೈಲಟ್‌ಗಳ ಆರೋಗ್ಯ ಮತ್ತು ಸುರಕ್ಷತಾ ಮಾನದಂಡಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ವಿಶೇಷ ತಪಾಸಣೆ ನಡೆಸಲಾಗುತ್ತಿದೆ. ನಿಯಂತ್ರಕ ಸಂಸ್ಥೆಗಳ ನಿಯಮಗಳನ್ನು ಈಗಾಗಲೇ ಪಾಲಿಸುತ್ತಿದ್ದರೂ, ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚುವರಿ ಪರಿಶೀಲನೆ ನಡೆಸಲು ಸಂಸ್ಥೆ ಮುಂದಾಗಿದೆ.

ತರಬೇತಿ ಕೇಂದ್ರದಲ್ಲೂ ತಪಾಸಣೆ

ಗುರುಗ್ರಾಮ್‌ನಲ್ಲಿರುವ ಏರ್ ಇಂಡಿಯಾ ಅಕಾಡೆಮಿಯಲ್ಲಿ ನಡೆಯುವ ತರಬೇತಿಯ ಜೊತೆಗೆ, ವಿಮಾನ ಹಾರಾಟದ ಬಳಿಕದ ಹಂತದಲ್ಲೂ ಡೋಪ್ ಟೆಸ್ಟ್ ನಡೆಸಲಾಗುತ್ತದೆ. ಏರ್ ಇಂಡಿಯಾದ ಫ್ಲೈಟ್ ಬ್ರಿಫಿಂಗ್ ಕೇಂದ್ರಗಳು ಹಾಗೂ ಸಂಬಂಧಿತ ಕಚೇರಿಗಳಲ್ಲಿಯೂ ಪರೀಕ್ಷೆ ನಡೆಯಲಿದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ:

ಫುಕೆಟ್-ದೆಹಲಿ ವಿಮಾನದಲ್ಲಿ ವಿವಾದ

ಆಗಸ್ಟ್ 4ರಂದು ಫುಕೆಟ್‌ನಿಂದ ದೆಹಲಿಗೆ ತೆರಳುತ್ತಿದ್ದ AI-2379 ವಿಮಾನದಲ್ಲಿ ಸುಮಾರು 300 ಅಡಿ ಎತ್ತರದ ಅಕಸ್ಮಾತ್ ಕೆಳಗೆ ಕುಸಿದಿತ್ತು. ವಿಮಾನದಲ್ಲಿದ್ದ 137 ಪ್ರಯಾಣಿಕರು ಮತ್ತು ಎಂಟು ಸಿಬ್ಬಂದಿಯ ಪೈಕಿ ಹಲವರಿಗೆ ಗಾಯಗಳಾಗಿದ್ದವು. ಬಳಿಕ ವಿಮಾನದ ಪೈಲಟ್ ಸುದೀಪ್ ವಶಿಷ್ಠ ಅವರ ಡ್ರಗ್ ಪರೀಕ್ಷೆಯಲ್ಲಿ ಗಾಂಜಾ ಪಾಸಿಟಿವ್ ಬಂದಿದೆ ಎಂಬ ವರದಿ ಹೊರಬಂದಿತ್ತು.

ಪೈಲಟ್ ಸುದೀಪ್ ವಶಿಷ್ಠ ಹೇಳಿದ್ದೇನು?

ವಿಮಾನಯಾನ ಸುರಕ್ಷತಾ ವರದಿಯ ಪ್ರಕಾರ, ಸುದೀಪ್ ವಶಿಷ್ಠ ಅವರು ತಮಗೆ ನಿದ್ರೆಗೆ ಸಂಬಂಧಿಸಿದ ಸಮಸ್ಯೆ ಇದ್ದು, ವೈದ್ಯರ ಸಲಹೆಯಂತೆ ಔಷಧಿ ಪಡೆಯುತ್ತಿದ್ದುದಾಗಿ ತಿಳಿಸಿದ್ದಾರೆ. ಪ್ರಯಾಣದ ಮುನ್ನ ವಿಶ್ರಾಂತಿ ಪಡೆಯಲು ಪ್ರಯತ್ನಿಸಿದರೂ ನಿದ್ರೆ ಸುಲಭವಾಗಿ ಬರಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

ಸುರಕ್ಷತೆಗೆ ಹೆಚ್ಚಿನ ಆದ್ಯತೆ

ಹೊಸ ಡೋಪ್ ಟೆಸ್ಟ್ ಕ್ರಮವು ವಿಮಾನಯಾನ ಸುರಕ್ಷತೆಯ ಮೇಲಿನ ಪ್ರಯಾಣಿಕರ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶ ಹೊಂದಿದೆ ಎಂದು ಏರ್ ಇಂಡಿಯಾ ತಿಳಿಸಿದೆ. ಪೈಲಟ್‌ಗಳ ವೃತ್ತಿಪರತೆ, ಆರೋಗ್ಯ ಮತ್ತು ಕರ್ತವ್ಯ ನಿರ್ವಹಣೆಯ ಬಗ್ಗೆ ಯಾವುದೇ ಅನುಮಾನಕ್ಕೆ ಅವಕಾಶ ಇರದಂತೆ ಹೆಚ್ಚುವರಿ ತಪಾಸಣೆ ನಡೆಸಲಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !