ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸ ವರ್ಷದ ಸಂಭ್ರಮಾಚರಣೆಗೆ ಸಿಲಿಕಾನ್ ಸಿಟಿ ಬೆಂಗಳೂರಿನ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರ, ಕೋರಮಂಗಲ ಸೇರಿದಂತೆ ವಿವಿಧ ಪ್ರದೇಶಗಳಿಗೆ ತೆರಳುವವರ
ಸಂಖ್ಯೆ ಸಾಕಷ್ಟು ಹೆಚ್ಚಾಗಿದೆ. ಆದರೆ, ಹೊಸ ವರ್ಷದ ಪಾರ್ಟಿ ಮುಗಿಸಿ ಮಧ್ಯರಾತ್ರಿ ಮನೆಗೆ ಹೋಗುವುದಕ್ಕೆ ಅನುಕೂಲ ಆಗಲೆಂದು ಬಿಎಂಆರ್‌ಸಿಎಲ್ ಸಂಸ್ಥೆಯಿಂದ ಮೆಟ್ರೋ ರೈಲು ಹಾಗೂ ಬಿಎಂಟಿಸಿ ವತಿಯಿಂದ ಬಸ್ಸುಗಳ ಸೇವೆಯನ್ನು ಮಧ್ಯರಾತ್ರಿ 2 ಗಂಟೆವರೆಗೆ ವಿಸ್ತರಣೆ ಮಾಡಲಾಗಿದೆ.
ಹೊಸ ವರ್ಷದ ಸಂಭ್ರಮವನ್ನು ಆಚರಣೆ ಮಾಡುವುದಕ್ಕೆ ರಾಜ್ಯ ಸರ್ಕಾರದಿಂದ ಮಧ್ಯರಾತ್ರಿ 1 ಗಂಟೆವರೆಗೆ ಅವಕಾಶ ನೀಡಲಾಗಿದೆ. ಆದ್ದರಿಂದ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಹಾಗೂ ಕ್ಲಬ್‌ಗಳು, ಪಬ್‌ಗಳು, ಬಾರ್ ಅಂಡ್ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳಲ್ಲಿ ಆಯೋಜನೆ ಮಾಡುವ ಪಾರ್ಟಿಗಳಲ್ಲಿ ಭಾಗವಹಿಸಿ ಮದ್ಯ ಸೇವನೆ ಮಾಡಿ ಮನೆಗೆ ಹೋಗುವವರ ಸಂಖ್ಯೆ ಸಾಕಷ್ಟಿದೆ. ಆದ್ದರಿಂದ ಅಂತಹ ಜನರಿಗೆ ಮನೆಗೆ ಹೋಗಲು ಅನುಕೂಲ ಆಗುವಂತೆ ಬಿಎಂಟಿಸಿ ತನ್ನ ಬಸ್ ಸೇವೆಯನ್ನು ಹಾಗೂ ಬಿಎಂಆರ್‌ಸಿಎಲ್ ಮೆಟ್ರೋ ಸೇವೆಯನ್ನು ಮಧ್ಯರಾತ್ರಿ 2 ಗಂಟೆವರೆಗೆ ವಿಸ್ತರಣೆ ಮಾಡಲಾಗಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬಿಎಂಆರ್‌ಸಿಎಲ್ ಸಂಸ್ಥೆಯು ‘ಹೊಸವರ್ಷದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವವರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ತನ್ನ ಸೇವಾ ಅವಧಿಯನ್ನು ವಿಸ್ತರಿಸಿದ್ದು, ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಕೊನೆಯ ರೈಲು ಜನವರಿ 1, 2025ರಂದು ಮುಂಜಾನೆ 2 ಗಂಟೆಗೆ ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಹೊರಡಲಿದೆ. ಮೆಜೆಸ್ಟಿಕ್ ನಿಂದ ಕೊನೆಯ ರೈಲು ಎಲ್ಲಾ ನಾಲ್ಕು ದಿಕ್ಕುಗಳಿಗೆ ಮುಂಜಾನೆ 2.40ಕ್ಕೆ ಹೊರಡಲಿದೆ.
ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣದ ಸೇವೆ ಸ್ಥಗಿತ:
ಡಿ.31ರಂದು ರಾತ್ರಿ 11 ಗಂಟೆಯಿಂದ ಎಂಜಿ ರಸ್ತೆ ಮೆಟ್ರೋ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನದ ದ್ವಾರಗಳನ್ನು ಮುಚ್ಚಲಾಗುತ್ತದೆ. ಹತ್ತಿರದ ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ರೈಲುಗಳು ನಿಲ್ಲುತ್ತವೆ. ₹50ರ ಪೇಪರ್ ಟಿಕೆಟ್ ಗಳು ಮುಂಗಡವಾಗಿ ಲಭ್ಯವಿದೆ. ಇದನ್ನು ಪಡೆದುಕೊಂಡು ರಾತ್ರಿ ವೇಳೆ ಟೋಕನ್ ತೆಗೆದುಕೊಳ್ಳಲು ಉಂಟಾಗುವ ಸರದಿ ಸಾಲಿನಿಂದ ಮುಕ್ತವಾಗಿ ಸುಲಭವಾಗಿ ಮೆಟ್ರೋ ಸೇವೆಯನ್ನು ಬಳಸಿಕೊಳ್ಳಲು ಸೂಚನೆ ನೀಡಿದೆ.
ಬಿಎಂಟಿಸಿ ಪ್ರಕಟಣೆಯಲ್ಲಿ ‘ಹೊಸ ವರ್ಷಾಚರಣೆ ಪ್ರಯುಕ್ತ ದಿನಾಂಕ 31.12.2024 ರಂದು ರಾತ್ರಿ 11:00 ಗಂಟೆಯ ನಂತರ ತಡರಾತ್ರಿ 02:00 ಗಂಟೆಯವರೆಗೆ ಕೆಳಕಂಡ ಮಾರ್ಗಗಳಲ್ಲಿ ಹೆಚ್ಚುವರಿ ಬಸ್ ಗಳ ಸೇವೆಯನ್ನು ನೀಡುತ್ತಿದ್ದೇವೆ. ಅಲ್ಲದೆ,ಜಂಕ್ಷನ್ ಗಳಾದ KBS, ಕೃ.ರಾ.ಮಾರುಕಟ್ಟೆ, ಶಿವಾಜಿನಗರ, ಕೋರಮಂಗಲ, ಕಾಡುಗೋಡಿ, ಕೆಂಗೇರಿ, ಸುಮನಹಳ್ಳಿ, ಗೊರಗುಂಟೆಪಾಳ್ಯ, ಯಶವಂತಪುರ, ಯಲಹಂಕ, ಶಾಂತಿನಗರ, ಬನಶಂಕರಿ, ಹೆಬ್ಬಾಳ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ಗಳಿಂದ ಪ್ರಯಾಣಿಕರ ದಟ್ಟಣೆ/ಬೇಡಿಕೆಗನುಗುಣವಾಗಿ ಸಾರಿಗೆ ಸೌಲಭ್ಯವನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.