ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೊಸ ವರ್ಷ 2025ರ ಸ್ವಾಗತಕ್ಕೆ ಯುವಜನರು ಕಾತರದಿಂದ ಕಾಯುತ್ತಿದ್ದಾರೆ. ಆದರೆ, ಇಲ್ಲೊಬ್ಬ ಭೂಪ ಸಂಜೆ 6.40ರ ವೇಳೆಗಾಗಲೇ ಕಂಠಪೂರ್ತಿ ಕುಡಿದು ರಸ್ತೆಯ ಡಿವೈಡರ್ ಮೇಲೆ ಕಾರು ಹತ್ತಿಸಿ ರಂಪಾಟ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಇಂದಿರಾನಗರದ 100 ಫೀಟ್ ರಸ್ತೆಯ 12ನೇ ಮೇನ್ ಜಂಕ್ಷನ್‌ನಲ್ಲಿ ನಡೆದಿದೆ. ಕುಡಿದ ಅಮಲಿನಲ್ಲಿ ಡಿವೈಡರ್ ಹತ್ತಿಸಿ ಸಂಚಾರಕ್ಕೆ ಅಡ್ಡಿ ಮಾಡಿದ್ದಲ್ಲದೇ ಅಪಘಾತ ನಡೆದ ಸ್ಥಳದ ಸುತ್ತಲೂ ಸುತ್ತುವರಿದ ಸಾರ್ವಜನಿಕರ ಮೇಲೂ ರಂಪಾಟ ಮಾಡಿದ್ದಾನೆ. ರಸ್ತೆಯಲ್ಲಿ ಅಡ್ಡಾದಿಡ್ಡಿ ಹೋಗುತ್ತಿದ್ದ ಕಾರು ಏಕಾಏಕಿಯಾಗಿ ಡಿವೈಡರ್ ಮೇಲೆ ಹತ್ತಿದೆ. ಒಳಗೆ ಇದ್ದ ವ್ಯಕ್ತಿಗೆ ಇತರೆ ವಾಹನ ಸವಾರರು ಬುದ್ಧಿ ಹೇಳಿದರೆ ಅವರ ಮೇಲೆಯೇ ದರ್ಪ ತೋರಿಸಿದ್ದಾನೆ.
ನಂತರ ಟ್ರಾಫಿಕ್ ಆಗುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದಾಗ ಕಾರು ಡಿವೈಡರ್ ಹತ್ತಿ ನಿಂತಿರುವುದು ಕಂಡು ಬೈದು ಕೆಳಗಿಳಿಸುವಂತೆ ಸೂಚನೆ ನೀಡಿದ್ದಾರೆ. ಆಗ ಕಾರಿನೊಳಗಿದ್ದ ವ್ಯಕ್ತಿ ಮದ್ಯಪಾನ ಮಾಡಿ ಕಾರು ಚಲಾಯಿಸಿ ಅವಘಡ ಮಾಡಿಕೊಂಡಿದ್ದಲ್ಲದೇ ಪೊಲೀಸ್ ಹಾಗೂ ಸಾರ್ವಜನಿಕರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಇದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣಗೊಂಡಿದ್ದು, ಕೂಲಡೇ ಕಾರಿನಲ್ಲಿ ನುರಿತ ಚಾಲಕರನ್ನು ಕೂರಿಸಿ ಡಿವೈಡರ್‌ನಿಂದ ನಿಧಾನವಾಗಿ ಕೆಳಗಿಳಿಸಿ ವಶಕ್ಕೆ ಪಡೆದಿದ್ದಾರೆ.