ಹೊಸ ವರ್ಷಾಚರಣೆ: ಐತಿಹಾಸಿಕ ಕೋಟೆ ವೀಕ್ಷಣೆಗೆ ಹರಿದುಬಂದ ಜನಸಾಗರ

ಹೊಸದಿಗಂತ ವರದಿ,ಚಿತ್ರದುರ್ಗ :

ಎಂ. ಜೆ.ತಿಪ್ಪೇಸ್ವಾಮಿ

ಹೊಸ ವರ್ಷದ ಅಂಗವಾಗಿ ಬುಧವಾರ ಇಲ್ಲಿನ ಐತಿಹಾಸಿಕ ಕೋಟೆ ವೀಕ್ಷಿಸಲು ಜನಸಾಗರವೇ ಹರಿದುಬಂದಿತ್ತು. ಕಣ್ಣು ಹಾಯಿಸಿದಷ್ಟು ದೂರಕ್ಕೆ ಜನರು ಗುಂಪು ಗುಂಪಾಗಿ ಕೋಟೆಯತ್ತ ಹರಿದು ಬರುತ್ತಿದ್ದ ದೃಶ್ಯ ಕಂಡುಬಂತು. ಇದರಿಂದಾಗಿ ಕೋಟೆಯ ಪ್ರವೇಶ ದ್ವಾರ ಜನಸಂದಣಿಯಿಂದ ತುಂಬಿ ತುಳುಕುತ್ತಿತ್ತು.

ಹೀಗೆ ಬಂದ ಜನರು ಸರತಿಯ ಸಾಲಿನಲ್ಲಿ ನಿಂತು ಕೋಟೆ ವೀಕ್ಷಿಸಲು ಟಿಕೆಟ್ ಪಡೆಯಲು ಹರಸಾಹಸ ಮಾಡುತ್ತಿದ್ದರು. ಟಿಕೆಟ್ ಪಡೆದ ಜನರು ಪ್ರವಾಹೋಪಾದಿಯಲ್ಲಿ ಕೋಟೆ ಪ್ರವೇಶಿಸುತ್ತಿದ್ದರು. ಜನಸಂದಣಿ ಹೆಚ್ಚಾಗಿದ್ದ ಕಾರಣ ಒಬ್ಬರಿಂದ ಒಬ್ಬರಂತೆ ಕೋಟೆಯ ಮೆಟ್ಟಿಲುಗಳ ಮೇಲೆ ಹೆಜ್ಜೆ ಹಾಕಿ ಸಾಗುತ್ತಿದ್ದುದು ಕಂಡುಬಂತು.

ತಂಡೋಪ ತಂಡವಾಗಿ ಕೋಟೆ ಪ್ರವೇಶಿಸಿದ ಸಾವಿರಾರು ಪ್ರವಾಸಿಗರು ಮದ್ದು ಬೀಸುವ ಕಲ್ಲು, ಒಂಟಿ ಕಲ್ಲಿನ ಬಸವಣ್ಣ, ಬಂಧಿಖಾನೆ, ಮಧ್ಯರಂಗ, ತುಪ್ಪದ ಕೊಳ, ಏಕನಾಥೇಶ್ವರಿ, ಬನಶಂಕರಿ, ಹಿಡಂಬೇಶ್ವರ, ಸಂಪಿಗೆ ಸಿದ್ದೇಶ್ವರ, ಬೆಟ್ಟದ ಗಣಪತಿ, ಗೋಪಾಲಸ್ವಾಮಿ ದೇವಸ್ಥಾನ ಹೀಗೆ ಇಲ್ಲಿನ ಐತಿಹಾಸಿಕ ದೇಗುಲಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದರು.

ಕೆಲವರು ಅಲ್ಲಲ್ಲಿ ಕೇಕ್ ಕತ್ತರಿಸುವ ಮೂಲಕ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ನಿರತರಾಗಿದ್ದರು. ಮತ್ತೆ ಕೆಲವರು ತಮಗೆ ಇಷ್ಟವಾದ ಸ್ಥಳಗಳು, ಸ್ಮಾರಕಗಳು, ಬಂಡೆಗಲ್ಲುಗಳ ಬಳಿ ನಿಂತು ತಮ್ಮ ಮೊಬೈಲ್‌ಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಯುವಕ ಯುವತಿಯರು, ನೂತನ ದಂಪತಿಗಳು, ಮಹಿಳೆಯರು ಮಕ್ಕಳು ಸೇರಿದಂತೆ ಅಸಂಖ್ಯಾತ ಜನರು ಕೋಟೆ ವೀಕ್ಷಣೆಗೆ ಆಗಮಿಸಿದ್ದರು.

ಹಂತ ಹಂತವಾಗಿ ಮೆಟ್ಟಿಲುಗಳನ್ನು ಹತ್ತಿ ಕೋಟೆಯ ಒಂದೊಂದೇ ದ್ವಾರಗಳನ್ನು ದಾಟಿ ಮುಂದೆ ಹೋಗುತ್ತಿದ್ದ ಜನರು ಐತಿಹಾಸಿ ಕೋಟೆಯ ಸೌಂದರ್ಯವನ್ನು ಕಂಡು ವಾವ್ ಎಂದು ಪುಳಕಿತರಾಗುತ್ತಿದ್ದರು. ಅಲ್ಲಲ್ಲಿ ಕಂಡುಬರುತ್ತಿದ್ದ ಹೆಬ್ಬಂಡೆಗಳು, ಐತಿಹಾಸಿಕ ತಾಣಗಳ ಬಳಿ ತಮ್ಮ ಸಂಗಾತಿಗಳ ಜೊತೆ ನಿಂತುಕೊಂಡು ಫೋಟೋ ಕ್ಲ್ಲಿಕ್ಕಿಸಿಕೊಳ್ಳುತ್ತಿದ್ದರು.

ಕೋಟೆ ಮಾತ್ರವಲ್ಲದೇ ಇಲ್ಲಿನ ಚಂದ್ರವಳ್ಳಿ, ಮುರುಘಾಮಠದ ಮುರುಘಾವನ, ಆಡುಮಲ್ಲೇಶ್ವರ ಸೇರಿದಂತೆ ಇನ್ನೂ ಅನೇಕ ಪ್ರವಾಸಿ ತಾಣಗಳಲ್ಲಿ ಎಲ್ಲಿ ನೋಡಿದರಲ್ಲಿ ಜನರ ಸಂದಣಿ ಕಂಡುಬಂತು. ಹೀಗೆ ಚಿತ್ರದುರ್ಗದ ಐತಿಹಾಸ ಕೋಟೆ ನೋಡಲು ಆಗಮಿಸಿದ್ದ ಜನರು ನಮ್ಮವರು, ತಮ್ಮವರು, ಪರಿಚಿತರು, ಅಪರಿಚಿತರು ಎಂಬ ಬೇಧ ಭಾವ ಮರೆತು ಪರಸ್ಪರ ಕೈಕುಲುಕುವ ಮೂಲಕ ಹೊಸ ವರ್ಷದ ಶುಭಾಷಯಗಳ ವಿನಿಮಯ ಮಾಡಿಕೊಂಡರು.

ತಾವು ತಂದಿದ್ದ ವಿಶೇಷ ತಿಂಡಿ ತಿನಿಸುಗಳು, ಬಗೆ ಬಗೆಯ ಕೇಕ್‌ಗಳನ್ನು ಸವಿದು ಸಂಭ್ರಮಿಸಿದರು. ಬೆಂಗಳೂರು, ತುಮಕೂರು, ಮಧುಗಿರಿ, ಪಾವಗಡ, ಬಳ್ಳಾರಿ, ಹರಪನಹಳ್ಳಿ, ಕೂಡ್ಲಿಗಿ, ದಾವಣಗೆರೆ, ಶಿವಮೊಗ್ಗ ಸೇರಿದಂತೆ ನಾನಾ ಕಡೆಗಳಿಂದ ಸಾವಿರಾರು ಸಂಖ್ಯೆಯ ಪ್ರವಾಸಿಗರ ದಂಡೇ ಹರಿದುಬಂದಿತ್ತು. ಕೋಟೆಯ ಮುಂದೆ ವಾಹನಗಳ ದಂಡೇ ಜಮಾಯಿಸಿತ್ತು. ಇದರಿಂದಾಗಿ ಸಂಚಾರ ದಟ್ಟಣೆ ಉಂಟಾಗಿತ್ತು. ಸಂಚಾರಿ ಪೊಲೀಸರು ಸುಗಮ ಸಂಚಾರ ವ್ಯವಸ್ಥೆಗೆ ಹರಸಾಹಸ ಪಡುವಂತಾಯಿತು.

ಕೋಟೆ ರಸ್ತೆಯ ಏಕನಾಥೇಶ್ವರಿ ಪಾದದ ಗುಡಿಯ ಬಳಿ ಕೆಲವು ಯುವಕರು ವಾಹನಗಳನ್ನು ಅಲ್ಲಿಯೇ ತಡೆದು ನಿಲ್ಲಿಸುತ್ತಿದ್ದರು. ಆ ಮೂಲಕ ಕೋಟೆ ಪ್ರವೇಶ ದ್ವಾರದ ಬಳಿ ಉಂಟಾಗುವ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದರು. ಹಾಗಾಗಿ ಆಟೋ, ಕಾರು, ಟೆಂಪೋ ಮತ್ತಿತರ ವಾಹನಗಳಲ್ಲಿ ಬರುತ್ತಿದ್ದ ಪ್ರಯಾಣಿಕರು ಪಾದದ ಗುಡಿಯ ಬಳಿ ಇಳಿದು ಕೋಟೆ ಪ್ರವೇಶ ದ್ವಾರದವರೆಗೆ ಕಾಲ್ನಡಿಗೆಯಲ್ಲ ತೆರಳುತ್ತಿದ್ದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!