ಸಚಿನ್‌ ತೆಂಡೂಲ್ಕರ್‌ ಶತಕ ದಾಖಲೆ ಮುರಿದ ನ್ಯೂಜಿಲೆಂಡ್‌ ನ ರಚಿನ್‌ ರವೀಂದ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರಿಕೆಟ್‌ ದಂತಕಥೆ ಸಚಿನ್‌ ತೆಂಡೂಲ್ಕರ್‌ (Sachin Tendulkar) ಅವರ ಶತಕ ದಾಖಲೆ ಸರಿಗಟ್ಟುವ ಸನಿಹದಲ್ಲಿ ಸದ್ಯ ಟೀಂ ಇಂಡಿಯಾ ಸ್ಟಾರ್‌ ಪ್ಲೇಯರ್‌ ವಿರಾಟ್‌ ಕೊಹ್ಲಿ (Virat Kohli), ದಾಪುಗಾಲುಡುತ್ತಿದ್ದು, ಆದ್ರೆ ಕೊಹ್ಲಿಗೂ ಮುನ್ನವೇ ನ್ಯೂಜಿಲೆಂಡ್‌ ಕ್ರಿಕೆಟಿಗ ರಚಿನ್‌ ರವೀಂದ್ರ (Rachin Ravindra) ತಾನು ಪ್ರವೇಶಿಸಿದ ಚೊಚ್ಚಲ ವಿಶ್ವಕಪ್‌ ಆವೃತ್ತಿಯಲ್ಲೇ ಸಚಿನ್‌ ತೆಂಡೂಲ್ಕರ್‌ ಅವರ ಶತಕ ದಾಖಲೆಯೊಂದನ್ನ ಮುರಿದಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (M Chinnaswamy Stadium) ನಡೆಯುತ್ತಿರುವ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡ ಪಾಕಿಸ್ತಾನದ ಎದುರು 50 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ ಭರ್ಜರಿ 401 ರನ್‌ ಬಾರಿಸಿತು. ಇಲ್ಲಿ ಪಾಕ್‌ ವಿರುದ್ಧ ರಚಿನ್‌ ರವೀಂದ್ರ ಭರ್ಜರಿ ಶತಕ ಸಿಡಿಸುವ ಮೂಲಕ ಅಭಿಮಾನಿಗಳಿಗೆ ರಸದೌತಣ ನೀಡಿದರು.

ಒಟ್ಟು 94 ಎಸೆತಗಳನ್ನು ಎದುರಿಸಿದ ರವೀಂದ್ರ 15 ಬೌಂಡರಿ, 1 ಸಿಕ್ಸರ್‌ ಸೇರಿ 108 ರನ್‌ ಗಳಿಸಿದರು. ಈ ಶತಕದೊಂದಿಗೆ ಭಾರತದ ಕ್ರಿಕೆಟ್‌ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ವಿಶೇಷ ದಾಖಲೆಯೊಂದನ್ನ ಮುರಿದ ಸಾಧನೆ ಮಾಡಿದರು.

ಆಸ್ಟ್ರೇಲಿಯಾ ವಿರುದ್ಧ ಧರ್ಮಶಾಲಾ ಕ್ರೀಡಾಂಗಣದಲ್ಲಿ 77 ಎಸೆತಗಳಲ್ಲಿ ಶತಕ ಸಿಡಿಸಿ ಸಚಿನ್‌ ದಾಖಲೆ ಸರಿಗಟ್ಟಿದ ರಚಿನ್‌, ಪ್ರಸಕ್ತ ವಿಶ್ವಕಪ್‌ ಆವೃತ್ತಿಯಲ್ಲಿ ಶತಕ ಸಿಡಿಸಿ ಸಚಿನ್‌ ದಾಖಲೆಯನ್ನ ಉಡೀಸ್‌ ಮಾಡಿದ್ದಾರೆ. ಜೊತೆಗೆ ಒಂದೇ ವಿಶ್ವಕಪ್‌ ಟೂರ್ನಿಯಲ್ಲಿ 3 ಶತಕ ಸಿಡಿಸಿದ ಕಿವೀಸ್‌ ಮೊದಲ ಆಟಗಾರ ಎಂಬ ಖ್ಯಾತಿಯನ್ನೂ ಗಳಿಸಿದ್ದಾರೆ.

24 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಏಕದಿನ ವಿಶ್ವಕಪ್‌ ಇತಿಹಾಸದಲ್ಲಿ 2 ಶತಕಗಳನ್ನು ಗಳಿಸಿದವರಲ್ಲಿ ಸಚಿನ್‌ ತೆಂಡೂಲ್ಕರ್‌ ಮೊದಲಿಗರಾಗಿದ್ದರು. ಸಚಿನ್‌ 23 ವರ್ಷದವರಾಗಿದ್ದಾಗ 1996ರ ವಿಶ್ವಕಪ್‌ನಲ್ಲಿ (World Cup) 2 ಶತಕ ಸಿಡಿಸಿದ್ದರು. ಇದೀಗ 23 ವರ್ಷ ವಯಸ್ಸಿನ ರಚಿನ್‌ ರವೀಂದ್ರ 2023ರ ವಿಶ್ವಕಪ್‌ ಟೂರ್ನಿಯಲ್ಲಿ 3 ಶತಕ ಸಿಡಿಸಿ ಸಚಿನ್‌ ದಾಖಲೆ ಮುರಿದಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್‌ನಲ್ಲಿ 7 ಪಂದ್ಯಗಳಲ್ಲಿ ಬರೋಬ್ಬರಿ 4 ಶತಕ ಸಿಡಿಸಿರುವ ದಕ್ಷಿಣ ಆಫ್ರಿಕಾ ಆಟಗಾರ ಕ್ವಿಂಟನ್‌ ಡಿಕಾಕ್‌ 545 ರನ್‌ ಸಿಡಿಸಿ ವಿಶ್ವಕಪ್‌ ಟೂರ್ನಿಯ ಟಾಪ್‌ ಸ್ಕೋರರ್‌ಗಳಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಆದ್ರೆ ಕೊಹ್ಲಿಯನ್ನು ಹಿಂದಿಕ್ಕಿದ ರವೀಂದ್ರ 8 ಪಂದ್ಯಗಳಲ್ಲಿ 3 ಶತಕ ಸಿಡಿಸಿರುವ 523 ರನ್‌ಗಳೊಂದಿಗೆ 2ನೇ ಸ್ಥಾನಕ್ಕೆ ಜಿಗಿದಿದ್ದಾರೆ. 442 ರನ್‌ ಬಾರಿಸಿರುವ ಕೊಹ್ಲಿ 3ನೇ ಸ್ಥಾನ, 428 ರನ್‌ ಗಳಿಸಿರುವ ಡೇವಿಡ್‌ ವಾರ್ನರ್‌ 4ನೇ ಸ್ಥಾನದಲ್ಲಿದ್ದರೆ, 402 ರನ್‌ ಬಾರಿಸಿರುವ ರೋಹಿತ್‌ ಶರ್ಮಾ 5ನೇ ಸ್ಥಾನದಲ್ಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!