ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀ ರಾಷ್ಟ್ರೀಯ ರಜಪೂತ ಕರ್ಣಿ ಸೇನೆಯ (SRRKS) ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೆಡಿ (Sukhdev Singh Gogamedi) ಹತ್ಯೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬುಧವಾರ ಪ್ರಮುಖ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಎನ್‌ಐಎ ರಾಜಸ್ಥಾನ ಮತ್ತು ಹರ್ಯಾಣದ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ್ದು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ. ಬಂಧಿತ ಆರೋಪಿ ಅಶೋಕ್ ಕುಮಾರ್ ಗ್ಯಾಂಗ್‌ಸ್ಟರ್ ರೋಹಿತ್ ಗೋಡಾರಾ ಜತೆ ನಿಕಟ ಸಂಪರ್ಕ ಹೊಂದಿದ್ದು, ಗೊಗಮೆಡಿ ಹತ್ಯೆಯ ಹೊಣೆಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ವಹಿಸಿಕೊಂಡಿದ್ದ. ಗೋಡಾರಾ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್‌ಗೆ ಸಂಬಂಧ ಹೊಂದಿದ್ದಾನೆ.
ಕುಮಾರ್ ಬಂಧನದೊಂದಿಗೆ, ಕೊಲೆಯಲ್ಲಿ ಬಂಧಿತರ ಒಟ್ಟು ಸಂಖ್ಯೆ 9 ಆಗಿದೆ. ಈ ಹಿಂದೆ ಎಂಟು ಮಂದಿಯನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದರು. 2023 ರ ಡಿಸೆಂಬರ್ 5 ರಂದು ಜೈಪುರದ ಕರ್ಣಿ ಸೇನಾ ಮುಖ್ಯಸ್ಥರ ಶ್ಯಾಮ್ ನಗರ ನಿವಾಸದಲ್ಲಿ ನಡೆದ ಶೂಟೌಟ್‌ನಲ್ಲಿ ಗೊಗಮೆಡಿ ಮತ್ತು ಮತ್ತೊಬ್ಬ ವ್ಯಕ್ತಿ ನವೀನ್ ಶೇಖಾವತ್ ಹತ್ಯೆಯಾಗಿತ್ತು.