ಹೊಸದಿಗಂತ ವರದಿ ಕಾರವಾರ:
ರಾಷ್ಟ್ರೀಯ ಸುರಕ್ಷತೆಯ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುವ ಅರ್ಗಾದ ಕದಂಬ ನೌಕಾನೆಲೆ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ನೈಟ್ ವಿಶನ್ ಡ್ರೋಣ್ ಹಾರಾಟ ನಡೆದಿರುವ ಕುರಿತು ಸ್ಥಳೀಯರೊಬ್ಬರು ನೌಕಾನೆಲೆ ನೆಲೆ ಅಧಿಕಾರಿಗಳ ಗಮನಕ್ಕೆ ತಂದಿದ್ದು ಈ ದಿಶೆಯಲ್ಲಿ ತೀವ್ರ ತನಿಖೆ ನಡೆಸಲಾಗುತ್ತಿದೆ.
ನೌಕಾನೆಲೆ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಡ್ರೋಣ್ ಹಾರಾಟಕ್ಕೆ ನಿಷೇದವಿದ್ದು ರಾತ್ರಿ ಸಮಯದಲ್ಲಿ ಡ್ರೋಣ್ ಹಾರಾಟ ಯಾರಿಂದ ನಡೆದಿದೆ ಎನ್ನುವುದು ಚರ್ಚೆಗೆ ಗ್ರಾಸವಾಗಿದೆ. ಅರ್ಗಾದ ವಕನಳ್ಳಿಯಿಂದ ಐಎನ್ಎಸ್ ಪತಂಜಲಿ ಆಸ್ಪತ್ರೆಯ ಹಿಂಬದಿಯಿಂದಾಗಿ ಬಿಣಗಾದ ಸುರಂಗ ಮಾರ್ಗದ ವರೆಗೆ ಸುಮಾರು 3 ಕಿ.ಮಿ ವ್ಯಾಪ್ತಿಯ ವರೆಗೆ ಡ್ರೋಣ್ ಹಾರಾಟ ನಡೆದಿದ್ದು ರಾಷ್ಟ್ರೀಯ ಹೆದ್ದಾರಿ ಮೂಲಕ ಯಾವುದಾದರೂ ವಾಹನಗಳಲ್ಲಿ ಕುಳಿತು ಡ್ರೋಣ್ ನಿಯಂತ್ರಣ ಮಾಡಲಾಗುತಿತ್ತೇ ಎನ್ನುವ ಕುರಿತು ಸಂಶಯಗಳು ವ್ಯಕ್ತವಾಗಿವೆ.
ದೇಶದ ಮಹತ್ವದ ರಕ್ಷಣಾ ಯೋಜನೆ ವ್ಯಾಪ್ತಿಯಲ್ಲಿ ಡ್ರೋಣ್ ಹಾರಾಟದ ಮೂಲಕ ನೌಕಾನೆಲೆಯ
ಚಿತ್ರೀಕರಣ ನಡೆಸಲಾಗಿದೆಯೇ ಎನ್ನುವ ಕುರಿತು ತನಿಖೆ ನಡೆಯುತ್ತಿದೆ. ನೌಕಾನೆಲೆಗೆ ಸಂಬಂಧಿಸಿದ ಆಂತರಿಕ ಮಾಹಿತಿಗಳನ್ನು ಕೆಲವರು ವಿದೇಶಿ ಗುಪ್ತಚರ ಸಂಸ್ಥೆಗಳಿಗೆ ಒದಗಿಸಿರುವುದು ಇತ್ತೀಚೆಗೆ ಗುಪ್ತಚರ ಇಲಾಖೆಯ ತನಿಖೆಯಿಂದ ಬಹಿರಂಗೊಂಡಿತ್ತಲ್ಲದೇ ಎನ್.ಐ.ಎ ವತಿಯಿಂದ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಇದೀಗ ನೌಕಾನೆಲೆಯ ನಿಷೇದಿತ ಪ್ರದೇಶದಲ್ಲಿ ಡ್ರೋಣ್ ಹಾರಾಟ ನಡೆದಿರುವುದನ್ನು ನೌಕಾದಳದ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ವಿಚಾರಣೆ ಆರಂಭಿಸಿದ್ದಾರೆ.