ಹೊಸ ದಿಗಂತ ವರದಿ,ಮೈಸೂರು:
ಬರುವ ವಿಧಾನಸಭೆ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಬ್ಲೂಪ್ರಿಂಟ್ ತಯಾರಿಸಲಾಗಿದ್ದು, ಅದರ ಪ್ರಕಾರವೇ ಪಕ್ಷದ ಸಂಘಟನೆ, ರಾಜಕೀಯ ಚಟುವಟಿಕೆ, ಯಾತ್ರೆಗಳನ್ನು ನಡೆಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಮಂಗಳವಾರ ಸಂಜೆ ಮೈಸೂರಿನ ಲಲಿತ ಮಹಲ್ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ರಾಜ್ಯದಲ್ಲಿ ಮೂರು ವರ್ಷಗಳ ಕಾಲ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಪಕ್ಷದ ಸಂಘಟನೆಯೂ ಸಾಕಷ್ಟು ಬೆಳೆದಿದೆ. ಹಾಗಾಗಿ ಪಕ್ಷದ ಸಂಘಟನೆ, ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊoಡು ಬರುವ ವಿಧಾನಸಭೆ ಚುನಾವಣೆಯನ್ನು ಎದುರಿಸುತ್ತೇವೆ ಎಂದು ಹೇಳಿದರು.
ಇತ್ತೀಚೆಗೆ ನಡೆದ ಗ್ರಾ.ಪಂ ಚುನಾವಣೆಯಿಂದ ಹಿಡಿದು ವಿಧಾನಪರಿಷತ್ ಚುನಾವಣೆಯ ತನಕ ಎಲ್ಲಾ ಚುನಾವಣೆಯಲ್ಲೂ ಪಕ್ಷದ ಹೆಚ್ಚಿನ ಗೆಲುವು ಸಾಧಿಸಿದೆ. ಹೆಚ್ಚಾಗಿ ಮತಗಳು ಬಂದಿವೆ. ಪಕ್ಷ ಹಾಗೂ ಸರ್ಕಾರದ ಮೇಲೆ ಜನರ ನಂಬಿಕೆ, ವಿಶ್ವಾಸ, ನಿರೀಕ್ಷೆಗಳು ಹೆಚ್ಚಾಗಿವೆ. ಸರ್ಕಾರದ ಹಾಗೂ ಪಕ್ಷದ ಹತ್ತಾರು ಕಾರ್ಯಕ್ರಮಗಳು ಜನರಿಗೆ ಸ್ಪಂದನೆಯಾಗಿವೆ. ಹಾಗಾಗಿ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಗೊಳಿಸಲು ಮತ್ತು ಸಂಘಟನೆಗೆ ವೇಗ ನೀಡಲು ಪಕ್ಷದ ನಾಯಕರ ಮೂರು ತಂಡಗಳು ರಾಜ್ಯಾದ್ಯಾಂತ ಪ್ರವಾಸ ಮಾಡುತ್ತಿವೆ. ಪ್ರತಿ ವಿಭಾಗಗಳ ಕೇಂದ್ರಗಳಲ್ಲಿ ಕಾರ್ಯಕರ್ತರು, ಮುಖಂಡರ ಸಭೆಗಳನ್ನು ನಡೆಸಿ, ಪಕ್ಷದ ಸರ್ಕಾರದ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತಿದೆ. ಸರ್ಕಾರದ ಆಡಳಿತ ವೈಖರಿ, ಜನರಿಗೆ ಸ್ಪಂದನೆ, ಆಯಾ ಜಿಲ್ಲೆಗಳ ರಾಜಕೀಯ ಸ್ಥಿತಿಗತಿಗಳು ಮುಂತಾದವುಗಳನ್ನು ಸಂಗ್ರಹಿಸಲಾಗುತ್ತಿದೆ. ಮುಖಂಡರ ನಡುವಿನ ಅಭಿಪ್ರಾಯ ಭೇದಗಳನ್ನು ಸರಿಪಡಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸರ್ಕಾರದಿಂದ ಜನರು ಏನೇನು ಅಪೇಕ್ಷೆ ಪಡುತ್ತಿದ್ದಾರೆ. ಜನರು ಏನೇನು ನಿರೀಕ್ಷೆಗಳನ್ನು ಮಾಡುತ್ತಿದ್ದಾರೆ ಮುಂತಾದ ಅಭಿಪ್ರಾಯಗಳನ್ನು ಕ್ರೋಢೀಕರಿಸಿ, ಸರ್ಕಾರದ ವೇಗವನ್ನು ಹೆಚ್ಚಿಸಲಾಗುತ್ತದೆ. ಏನಾದರೂ ಬದಲಾವಣೆ ಮಾಡುವುದಿದ್ದರೆ, ಮಾಡಲಾಗುತ್ತದೆ. ಈಗಾಗಲೇ ಪಕ್ಷದಿಂದ ಬೂತ್ ಮಟ್ಟದ ಸಮಿತಿ, ಪೇಜ್ ಪ್ರಮುಖರನ್ನು ರಚಿಸಲಾಗಿತ್ತು. ಅವರ ಕೆಲಸ, ಕಾರ್ಯಗಳು ಯಶಸ್ವಿಯಾಗಿದೆ. ಬಳಿಕ ಪೇಜ್ ಪ್ರಮುಖರ ಸಮಿತಿ, ವಿಸ್ತಾರಕನ್ನೂ ನೇಮಿಸಲಾಗಿತ್ತು. ಅದರ ಕೆಲಸವೂ ಯಶಸ್ವಿಯಾಗಿದೆ. ಮುಂದೆ ಕಾರ್ಯಕರ್ತರೊಂದಿಗೆ ನಿರಂತವಾಗಿ ಸಂವಾದ, ಜನರ ಮನೆ, ಮನೆ ಬಳಿಗೆ ಕಾರ್ಯಕರ್ತರ ತೆರಳಿ ಸಂಪರ್ಕ ಸಾಧಿಸುವುದು, ಸಂವಾದ ನಡೆಸುವುದು, ಯಾತ್ರೆಗಳನ್ನು ನಡೆಸಲಾಗುವುದು ಎಂದು ಹೇಳಿದರು.
ಘಟನೆಗಳ ಲಾಭ ಪಡೆಯಲು ಇಚ್ಚಿಸುವುದಿಲ್ಲ; ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್, ಹಲಾಲ್ ಸೇರಿದಂತೆ ಯಾವುದೇ ಘಟನೆಗಳಲ್ಲಿ ಬಿಜೆಪಿಯ ಪಾತ್ರವಿಲ್ಲ, ಆಯಾ ಸಂಘಟನೆಯವರು ಮಾಡಿದರೆ, ಅದಕ್ಕೆ ಪಕ್ಷ ಜವಾಬ್ದಾರಿಯಲ್ಲ, ಶ್ರೀರಾಮ ಸೇನೆಗೂ, ಬಿಜೆಪಿಗೂ ಯಾವುದೇ ಸಂಬAಧವಿಲ್ಲ. ಘಟನೆಗಳಲ್ಲಿ ಯಾವುದೇ ಹಸ್ತ ಕ್ಷೇಪವನ್ನು ಬಿಜೆಪಿ ಮಾಡುವುದಿಲ್ಲ ಎಂದು ತಿಳಿಸಿದರು.
ಯಾವ ವರ್ಗವನ್ನೂ ಟಾರ್ಗೇಟ್ ಮಾಡುತ್ತಿಲ್ಲ; ಬಿಜೆಪಿ ಯಾವ ವರ್ಗವನ್ನೂ ಟಾರ್ಗೆಟ್ ಮಾಡುತ್ತಿಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲಾ ಘಟನೆಗಳನ್ನು ಬಿಜೆಪಿ ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿದೆ. ನ್ಯಾಯಾಲಯದ ತೀರ್ಪು, ಆದೇಶಗಳನ್ನು ಪಾಲಿಸುತ್ತಿದೆ. ಸಮಸ್ಯೆಗಳು ನ್ಯಾಯಾಲಯದಲ್ಲಿವೆ. ಅಲ್ಲಿಂದ ಏನೇ ತೀರ್ಪುಗಳು, ಆದೇಶಗಳು ಬಂದರೂ ಅದನ್ನು ಒಪ್ಪಿಕೊಳ್ಳಬೇಕು ಎಂದರು.
ರಾಜ್ಯದಲ್ಲಿ ಎದುರಾಗಿರುವ ಹತ್ತಾರು ಸಮಸ್ಯೆಗಳ ಲಾಭವನ್ನು ಪಡೆಯಲು ಬಿಜೆಪಿ ಇಚ್ಚಿಸುವುದಿಲ್ಲ. ಪರಿಸ್ಥಿತಿಯ ಲಾಭ ಪಡೆಯಲು ಹಿಂದುಗಳ ಮತ ಬ್ಯಾಂಕ್ ಕ್ರೋಢೀಕರಣವನ್ನೂ ಮಾಡುವುದಿಲ್ಲ. ಆದರೆ ಕಾಂಗ್ರೆಸ್‌ನವರು ಪರಿಸ್ಥಿತಿ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ. ಮತ ಬ್ಯಾಂಕ್ ಮಾಡಿಕೊಳ್ಳಲು ಹವಣಿಸುತ್ತಿದ್ದಾರೆ. ಬಿಜೆಪಿ ಅಂತಹ ಅಗತ್ಯವಿಲ್ಲ, ನಾವು ಅಭಿವೃದ್ಧಿ ಕೆಲಸದ ಮೇಲೆ ನಡೆಯುತ್ತೇವೆ. ಸರ್ಕಾರದ ಜವಾಬ್ದಾರಿಯುತ ಕ್ರಮ, ನಡೆಗಳಿಂದ ಬಿಜೆಪಿಗೆ ಲಾಭ ಬಂದರೆ ತಪ್ಪಿಲ್ಲ ಎಂದರು.
ಯಾವ ಪಕ್ಷದೊಂದಿಗೂ ಹೊಂದಾಣಿಕೆಯಿಲ್ಲ; ಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಸೇರಿದಂತೆ ಯಾವ ಪಕ್ಷದೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ, ಎಲ್ಲಾ ಕ್ಷೇತ್ರಗಳಲ್ಲೂ ಸಮರ್ಥ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸಲಿದೆ ಎಂದು ಸ್ಪಷ್ಟಪಡಿಸಿದರು.
ಸರ್ಕಾರದ ಆಡಳಿತಾತ್ಮಕ ದೃಷ್ಠಿಯಿಂದ ಮೈಸೂರು ಸೇರಿದಂತೆ ಕೆಲ ಜಿಲ್ಲೆಗಳಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಆ ಜಿಲ್ಲೆಗಳಿಗೂ ಸಚಿವ ಸ್ಥಾನ ಸಿಗಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಚಿವರುಗಳಾದ ಕೆ.ಎಸ್.ಈಶ್ವರಪ್ಪ ಗೋಪಾಲಯ್ಯ, ನಾರಾಯಣಗೌಡ, ವಿ.ಸೋಮಣ್ಣ, ಎಸ್.ಟಿ.ಸೋಮಶೇಖರ್, ಶಾಸಕರುಗಳಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಉಪಾಧ್ಯಕ್ಷ ರಾಜೇಂದ್ರ, ಮೈಸೂರು ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ಗ್ರಾಮಾಂತರ ಅಧ್ಯಕ್ಷೆ ಮಂಗಳಸೋಮಶೇಖರ್, ರಾಜ್ಯ ಮುಖ್ಯ ವಕ್ತಾರ ಎಂ.ಜಿ.ಮಹೇಶ್, ಮೈಸೂರು ಸಹ ವಕ್ತಾರ ವಸಂತ್‌ಕುಮಾರ್, ಮಾಧ್ಯಮ ಪ್ರಮುಖರಾದ ಮಹೇಶ್ ರಾಜೇ ಅರಸ್, ಕೇಬಲ್ ಮಹೇಶ್, ಪ್ರದೀಪ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.