ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ಮತ್ತೆ ಮಾರಕ ನಿಫಾ ವೈರಾಣು ಭೀತಿ ಆರಂಭವಾಗಿದ್ದು, ಗುರುವಾರ ಮತ್ತೊಂದು ಪ್ರಕರಣ ವರದಿಯಾಗಿದೆ.
ಗುರುವಾರ ಕೇರಳದ ಮಲಪ್ಪುರಂನಲ್ಲಿ ಮಾರಕ ನಿಫಾ ವೈರಸ್‌ನ ಮತ್ತೊಂದು ಸೋಂಕು ಪ್ರಕರಣ ವರದಿಯಾಗಿದ್ದು, 2018 ರಿಂದ ರಾಜ್ಯದಲ್ಲಿ ಏಳನೇ ಪ್ರಕರಣ ಇದಾಗಿದೆ.
ಮಲಪ್ಪುರಂ ಜಿಲ್ಲೆಯ ವಲಂಚೇರಿಯ ನಿವಾಸಿ 42 ವರ್ಷದ ಮಹಿಳೆ ಸೋಂಕಿಗೆ ತುತ್ತಾಗಿದ್ದು, ಸೋಂಕಿತ ಮಹಿಳೆ ಪ್ರಸ್ತುತ ಪೆರಿಂಥಲ್ಮನ್ನಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈರಸ್ ಮತ್ತಷ್ಟು ಹರಡುವುದನ್ನು ತಡೆಯಲು ಅಧಿಕಾರಿಗಳು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕೋಝಿಕ್ಕೋಡ್ ಮೈಕ್ರೋಬಯಾಲಜಿ ಲ್ಯಾಬ್ ಮತ್ತು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಯಲ್ಲಿ ನಡೆಸಿದ ಪರೀಕ್ಷೆಗಳ ನಂತರ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ. ಮಲಪ್ಪುರಂ ಜಿಲ್ಲೆಯಲ್ಲಿ ನಿಪಾ ವೈರಸ್ ಏಕಾಏಕಿ ಕಾಣಿಸಿಕೊಂಡಿರುವುದು ಇದು ಮೂರನೇ ಬಾರಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.