Sunday, December 3, 2023

Latest Posts

ರಾಷ್ಟ್ರಸಂತ ತಂಗಿದ್ದ ಮನೆಯಲ್ಲೀಗ ನಿತ್ಯ ಜ್ಞಾನ ದಾಸೋಹ

ರಾಮಚಂದ್ರ ಸುಣಗಾರ

ಗಂಡು ಮೆಟ್ಟಿದ ನಾಡು ಬೆಳಗಾವಿ ಅನೇಕ ವೀರ ಶೂರರ ತವರೂರು. ಅಷ್ಟೇ ಅಲ್ಲ ಸಾಧು ಸಂತರು ಅವತರಿಸಿದ ಮತ್ತು ಸಂಚರಿಸಿದ ಪವಿತ್ರ ಪುಣ್ಯಭೂಮಿಯೂ ಹೌದು. ಇಂತಹ ಪುಣ್ಯಭೂಮಿ ಮಹಾನ್ ಸಂತ, ರಾಷ್ಟ್ರ ಸನ್ಯಾಸಿ ಸ್ವಾಮಿ ವಿವೇಕಾನಂದರಿಗೆ ಆತಿಥ್ಯ ನೀಡಿತ್ತು ಎಂಬುದೇ ದಿವ್ಯಾನುಭೂತಿ.

ಇಲ್ಲಿನ ರಿಸಾಲ್ದಾರ್ ಗಲ್ಲಿಯಲ್ಲಿರುವ ಮನೆಯಲ್ಲಿ 1892 ಅಕ್ಟೋಬರ್ 16ರಂದು ಪಾದಾರ್ಪಣೆ ಮಾಡಿದ್ದ ಸ್ವಾಮಿ ವಿವೇಕಾನಂದರು ಮೂರು ದಿನಗಳ ಕಾಲ ಜ್ಞಾನ ಬೋಧನೆ ಮಾಡಿದ್ದರು. ಧರ್ಮ ಪ್ರಚಾರ ಮತ್ತು ಧಾರ್ಮಿಕ ಚಿಂತನೆಗಳ ಪ್ರಚಾರಕ್ಕಾಗಿ ದೇಶ ಸಂಚಾರ ಕೈಗೊಂಡಿದ್ದ ಸ್ವಾಮಿ ವಿವೇಕಾನಂದರು ರಿಸಾಲ್ದಾರ ಗಲ್ಲಿಯಲ್ಲಿನ ಬಾಲಕೃಷ್ಣಪಂತ್ ಭಾಟೆ ಎಂಬುವವರ ಮನೆಯಲ್ಲಿ 3 ದಿನಗಳು ತಂಗಿ ನಂತರ ಕೋಟೆ ಆವರಣದ ಅವರ ಮಿತ್ರರ ಮನೆಯಲ್ಲಿ 9 ದಿನಗಳ ಕಾಲ ತಂಗಿದ್ದರು.

ಬೆಳಗಾವಿ ಭೇಟಿ ನೀಡಿ 130 ವರ್ಷಗಳೇ ಉರುಳಿವೆ. ಆದರೂ ಕೂಡ ಅವರು ತಂಗಿದ್ದ ಈ ಮನೆ ಈಗ ರಾಮಕೃಷ್ಣ ಮಿಶನ್ ಸಹಯೋಗದಲ್ಲಿ ಆಶ್ರಮವಾಗಿ ಮಾರ್ಪಟ್ಟಿದೆ. ಈ ಮನೆಯೀಗ ವಸ್ತು ಸಂಗ್ರಹಾಲಯ ಅಲ್ಲದೇ, ಜ್ಞಾನ ದಾಸೋಹದ ಮುಖ್ಯ ಕೇಂದ್ರವಾಗಿ ಮಾರ್ಪಟ್ಟಿದೆ.

ಸ್ಮಾರಕವಾದ ಮನೆ

ವಿವೇಕಾನಂದರಿಗೆ ಆತಿಥ್ಯ ಒದಗಿಸಿದ್ದ ಬಾಲಕೃಷ್ಣಪಂತ್ ಭಾಟೆಯವರು ಸಂಕೇಶ್ವರ ಬಳಿಯ ಬೆಳವಿ ಗ್ರಾಮದ ನ್ಯಾಯವಾದಿಯೊಬ್ಬರಿಗೆ ಈ ಮನೆಯನ್ನು ಮಾರಾಟ ಮಾಡಿದ್ದರು. ಆ ಕುಟುಂಬದವರು ಸರ್ಕಾರದ ಮನವೊಲಿಕೆ ನಂತರ ರಾಮಕೃಷ್ಣ ಆಶ್ರಮದವರಿಗೆ ಹಸ್ತಾಂತರಿಸಿ, ಈಗ ಈ ಮನೆ ಸ್ಮಾರಕವಾಗಿ ಮಾರ್ಪಾಡಾಗಿದೆ.

ಇಡೀ ಮನೆ ನವೀಕರಣಗೊಂಡಿದೆ. ಅಂದು ಸ್ವಾಮಿ ವಿವೇಕಾನಂದರು ಬಳಸಿದ್ದ ಮಂಚ, ಕನ್ನಡಿ, ಕೈಯಲ್ಲಿನ ಕೋಲನ್ನು ಈಗಲೂ ಸಂರಕ್ಷಿಸಿ ಇಡಲಾಗಿದೆ. ಜೊತೆಗೆ ಸ್ವಾಮಿ ವಿವೇಕಾನಂದರ ಜೀವನ ಸಂದೇಶ ಸಾರುವ ಚಿತ್ರಕಲೆ ಒಳಗೊಂಡ ದೊಡ್ಡ ಗಾತ್ರದ ಪೋಟೊಗಳನ್ನು ಪ್ರತಿಯೊಂದು ಕೋಣೆಯಲ್ಲಿ ಹಾಕಲಾಗಿದೆ. ಹಲವು ವಸ್ತುಗಳನ್ನು ಪ್ರದರ್ಶನಕ್ಕಿಡಲಾಗಿದೆ.

ನಿತ್ಯ ಜ್ಞಾನ ದಾಸೋಹ….

ಈ ಆಶ್ರಮದಲ್ಲಿ ನಿತ್ಯವೂ ಅಧ್ಯಾತ್ಮಿಕ ಚಿಂತನೆಗಳ ಸಂದೇಶ ಪ್ರಸ್ತುಪಡಿಸಲಾಗುತ್ತದೆ. ಅಲ್ಲದೇ, ಜ್ಞಾನ ಮಂದಿರದಲ್ಲಿ ಪ್ರಾರ್ಥನೆ, ಸ್ವಾಮಿಗಳಿಂದ ಸಂದೇಶ ವಾಚನ ನಿತ್ಯ ನಡೆಯುತ್ತದೆ. ಪ್ರತಿ ದಿನ ಭಕ್ತವೃಂದ ಆಶ್ರಮಕ್ಕೆ ಆಗಮಿಸಿ ಅನುಭೂತಿ ಪಡೆದು ಧನ್ಯರಾಗುತ್ತಿದ್ದಾರೆ.

ಅಲ್ಲದೇ, ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಭೇಟಿ ನೀಡಿ ಮಹಾನ್ ಸಂತ ಬಳಸಿದ ವಸ್ತುಗಳನ್ನು ಕಣ್ತುಂಬಿಕೊಳ್ಳುತ್ತಾರೆ. ಪ್ರತಿ ವರ್ಷ ಸುಮಾರು ಎರಡು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭೇಟಿ ಕೊಡುತ್ತಿರುವುದು ಈ ಆಶ್ರಮದ ವಿಶೇಷ.

ಹಿರಿಯರ ಮೆಲಕು

ಬೆಳಗಾವಿಯ ಮನೆಯೊಂದರಲ್ಲಿ ಸ್ವಾಮಿ ವಿವೇಕಾನಂದರು ಮೂರು ದಿನಗಳ ಕಾಲ ತಂಗಿದ್ದರು ಎಂಬುದೇ ಒಂದು ದಿವ್ಯಾನುಭೂತಿ. ಅವರನ್ನು ಭೇಟಿಯಾದ ಭಕ್ತ ವೃಂದಕ್ಕೆ ಸರಿಸುಮಾರು ವರ್ಷದ ಬಳಿಕ ಚಿಕಾಗೋದಲ್ಲಿ ಭಾಷಣ ಮಾಡಿ ಇಡೀ ವಿಶ್ವದ ಗಮನ ಸೆಳೆದ ಯುವಕ ಇವರೇ ಎಂದು ಆಶ್ಚರ್ಯ ವ್ಯಕ್ತಿಪಡಿಸಿದ್ದರು ಎಂಬುದರ ಕುರಿತು ಈಗಲೂ ಮೆಲಕು ಹಾಕುತ್ತಾರೆ ಹಿರಿಯರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!