ಬಿಜೆಪಿಯ ಯಾವ ಶಾಸಕರು ಕಾಂಗ್ರೆಸ್‌ಗೆ ಹೋಗಲ್ಲ: ಛಲವಾದಿ ನಾರಾಯಣಸ್ವಾಮಿ

ಹೊಸದಿಗಂತ ವರದಿ, ಚಿತ್ರದುರ್ಗ 
ಈಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಹೋಗುವುದು ಅನುಮಾನ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿ ಶಾಸಕರು ಯಾರೂ ಅಷ್ಟು ದಡ್ಡತನ ಮಾಡುವುದಿಲ್ಲ ಎಂದು ಬಿಜೆಪಿಯ ೮ ಶಾಸಕರು ಪಕ್ಷ ತೊರೆಯುವ ಬಗ್ಗೆ ಹೇಳಿಕೆ ನೀಡಿದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್‌ಗೆ ಟಾಂಗ್ ನೀಡಿದ ಅವರು, ಎಸ್.ಟಿ.ಸೋಮಶೇಖರ್ ಬಿಜೆಪಿಯಿಂದ ಹೊರಗೆ ನಿಂತಿದ್ದಾರೆ. ಹಾಗಾಗಿ ಈ ರೀತಿ ಮಾತನಾಡುತ್ತಿದ್ದಾರೆ ಎಂದರು.
ಜನ ಈಗಾಗಲೇ ರಾಜ್ಯ ಸರ್ಕಾರದ ವಿರುದ್ದ ಕೋಪಗೊಂಡಿದ್ದಾರೆ. ಅಭಿವೃದ್ಧಿ ಎಂಬುದು ರಾಜ್ಯದಲ್ಲಿ ಮಾಯ ಆಗಿದೆ. ಖಜಾನೆ ದುಡ್ಡು ಎಲ್ಲಿ ಲೂಟಿ ಆಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಕಾಂಗ್ರೆಸ್ ವಿರುದ್ಧ ಜನ ತಿರುಗಿ ಬೀಳುವ ಸಂದರ್ಭವಿದು ಎಂದು ಹೇಳಿದರು.
ಐದು ಗ್ಯಾರಂಟಿ ಹೆಸರಲ್ಲಿ ಒಂದೂ ವರ್ಷದಿಂದ ಸರ್ಕಾರ ನಡೆಸಲಾಗುತ್ತಿದೆ. ಗ್ಯಾರಂಟಿ ಯೋಜನೆಗಳು ಸಹ ಯಾರಿಗೂ ತಲುಪುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಬಿಟ್ಟಿರುವ ಒಂದು ಬಾಣವಿದು ಅಷ್ಟೆ ಎಂದ ಅವರು, ಸಿ.ಪಿ.ಯೋಗೀಶ್ವರ್‌ಗೆ ಬಿಜೆಪಿ ತೊರೆಯದೆ ವಿಧಿ ಇರಲಿಲ್ಲ. ಬಿಜೆಪಿಯಿಂದ ಯೋಗೀಶ್ವರ್‌ಗೆ ಅನ್ಯಾಯ ಆಗಿಲ್ಲ ಎಂದು ಅವರೇ ಹೇಳಿದ್ದಾರೆ. ಅನುಕೂಲ ಸಿಂಧು ರಾಜಕಾರಣಕ್ಕಾಗಿ ಹೋಗಿದ್ದಾರೆ ಎಂದರು.
ಜೆಡಿಎಸ್ ಪಕ್ಷದ ಮೂಲಕ ಸ್ಪರ್ಧಿಸಿ ಎಂದೆವು. ನಮ್ಮ ಪಕ್ಷದಿಂದಲೇ ಸ್ಪರ್ಧಿಸಿ ಎಂದು ಸಹ ಹೇಳಿದ್ದೆವು ಬಿಜೆಪಿ ಟಿಕೆಟ್ ಘೋಷಣೆ ಆಗುವ ಮುನ್ನ ರಾಜೀನಾಮೆ ನೀಡಿದರು. ಅನೇಕ ಆಫರ್‌ಗಳು ಬಂದ ಕಾರಣ ಕಾಂಗ್ರೆಸ್ ಸೇರಿದ್ದಾರೆ. ಕಾಂಗ್ರೆಸ್‌ನಿಂದ ಗೆದ್ದರೆ ಮಂತ್ರಿ ಆಗಬಹುದೆಂದು ಹೋಗಿದ್ದಾರೆ ಎಂದು ಟೀಕಿಸಿದರು.
ಚನ್ನಪಟ್ಟಣದಲ್ಲಿ ಈ ಸಲ ಎನ್‌ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಗೆಲ್ಲುತ್ತಾರೆ. ನಿಖಿಲ್ ಗೆದ್ದರೆ ರಾಜ್ಯಕ್ಕೆ ಹೊಸ ನಾಯಕತ್ವ ಕೊಟ್ಟಂತಾಗುತ್ತದೆ. ಮುಡಾ ಪ್ರಕರಣ ತನಿಖೆ ಆದೇಶ ಪ್ರಶ್ನಿಸಿ ಸಿಎಂ ಹೈಕೋರ್ಟ್ ಮೊರೆ ಹೋಗಿದ್ದಾರೆ. ಸಿಎಂ ಭಯಭೀತರಾಗಿ ನಿವೇಶನಗಳನ್ನು ವಾಪಸ್ ನೀಡಿದ್ದಾರೆ. ಪ್ರಕರಣದಿಂದ ಹೊರಬರಲು ಕೋರ್ಟ್‌ಗಳಿಗೆ ಅಲೆಯುತ್ತಿದ್ದಾರೆ. ಸಿಎಂ ಸಿದ್ಧರಾಮಯ್ಯರಲ್ಲಿ ಕಲ್ಮಶ ಇಲ್ಲದಿದ್ದರೆ ಈಸ್ಥಿತಿ ಬರುತ್ತಿರಲಿಲ್ಲ ಎಂದರು.
ಮೂರು ಕ್ಷೇತ್ರದ ಉಪ ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲಲಿದೆ. ಶಿಗ್ಗಾವಿ ಕ್ಷೇತ್ರಕ್ಕೆ ಭರತ್‌ಗೆ ಟಿಕೆಟ್ ಬೇಡ ಎಂದು ಬೊಮ್ಮಾಯಿ ಹೇಳಿದ್ದರು. ಸರ್ವೆ ರಿಪೋರ್ಟ್ ಆಧಾರದ ಮೇಲೆ ಹೈಕಮಾಂಡ್ ಟಿಕೆಟ್ ನೀಡಿದೆ ಎಂದರು.
ಈ ಸಂದರ್ಭದಲ್ಲಿ ಎಂ.ಕೆ ನಟರಾಜು, ಲೋಕೇಶ್, ಎನ್.ತಿಪ್ಪೇಸ್ವಾಮಿ, ರುದ್ರಪ್ಪ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!