ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ಚಿಕ್ಕಮಗಳೂರಿಗೆ ಆಗಮಿಸಿದ ಕೋಟಾ ಶ್ರೀನಿವಾಸ ಪೂಜಾರಿ ಮೊದಲು ದತ್ತಪೀಠಕ್ಕೆ ತೆರಳಿ ಪಾದುಕೆಗಳ ದರುಶನ ಪಡೆದು ನಂತರ ಚುನಾವಣಾ ಪ್ರಚಾರಕ್ಕಿಳಿದಿದ್ದಾರೆ.
ಶನಿವಾರ ನಗರಕ್ಕಾಗಮಿಸಿದ ಅವರು ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜ ಶೆಟ್ಟಿ ಸೇರಿದಂತೆ ಇತರೆ ಮುಖಂಡರೊಂದಿಗೆ ನೇರವಾಗಿ ದತ್ತಪೀಠಕ್ಕೆ ತೆರಳಿದರು. ಅರ್ಚಕರು ಪಾದುಕೆಗಳಿಗೆ ಪೂಜೆ ನೆರವೇರಿಸಿ ತೀರ್ಥ ಪ್ರಸಾದ ನೀಡಿ ಆಶೀರ್ವದಿಸಿದರು.
ಈ ವೇಳೆ ಪೀಠದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಈಶ್ವರಪ್ಪ ಬಂಡಾಯ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಕುರಿತು ಪ್ರತಿಕ್ರಿಯೆ ನೀಡಿ, ಈಶ್ವರಪ್ಪ ನಮ್ಮ ಪಕ್ಷದ ಹಿರಿಯ ನಾಯಕ. ಎರಡು ದಿನದಲ್ಲಿ ಎಲ್ಲವೂ ಸರಿಯಾಗುತ್ತೆ. ಹಿರಿಯ ನಾಯಕರು ಈಶ್ವರಪ್ಪನವರ ಜೊತೆ ಮಾತುಕತೆ ನಡೆಸಲಿದ್ದಾರೆ ಎಂದರು.
ಹಾವೇರಿ ಟಿಕೆಟ್ ತಮ್ಮ ಪುತ್ರ ಕಾಂತೇಶ್‌ಗೆ ನೀಡಬೇಕೆಂಬುದು ಈಶ್ವರಪ್ಪನವರ ಬಯಕೆಯಾಗಿತ್ತು. ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ ಟಿಕೆಟ್ ನೀಡಬೇಕಾಗುತ್ತದೆ. ಎಲ್ಲವನ್ನು ಸಮನ್ವಯವಾಗಿಸಿಕೊಂಡು ಹೋಗಬೇಕಿರುವುದು ಪಕ್ಷದ ಜವಾಬ್ದಾರಿ. ನಮ್ಮ ಪಕ್ಷ ಆ ಕೆಲಸ ಮಾಡುತ್ತೆ. ಈ ಸಮಸ್ಯೆಗೆ ಹೈಕಮಾಂಡ್ ಸೂಕ್ತ ತೀರ್ಮಾನ ಕೈಗೊಳ್ಳುತ್ತದೆ ಎಂದರು.
ಪಕ್ಷದ ಮುಖಂಡರುಗಳಾದ ಸಿ.ಆರ್. ಪ್ರೇಂಕುಮಾರ್, ಡಾ. ನರೇಂದ್ರ, ಬಿ.ರಾಜಪ್ಪ, ಸಂದೀಪ್ ಹರವಿನಗಂಡಿ, ಶಶಿ ಆಲ್ದೂರು ಇತರರು ಇದ್ದರು.
ಬೀದಿಬದಿ ಟೀ ಸೇವನೆ
ಸರಳತೆಗೆ ಹೆಸರಾದ ಕೋಟ ಶ್ರೀನಿವಾಸ ಪೂಜಾರಿ ಅವರು ದತ್ತಪೀಠಕ್ಕೆ ತೆರಳುವ ಮುನ್ನ ಕಾರ್ಯಕರ್ತರ ಜೊತೆ ರಸ್ತೆ ಬದಿ ತಳ್ಳುಗಾಡಿಯ ಕ್ಯಾಂಟೀನ್‌ನಲ್ಲಿ ತಮಗೆ ಪ್ರಿಯವಾದ ಟೀ ಮತ್ತು ಬನ್ ಸೇವಿಸಿ ಪ್ರಯಾಣ ಮುಂದುವರಿಸಿದರು.