May 19, 2026
Tuesday, May 19, 2026
spot_img

ಭದ್ರತಾ ಶಿಷ್ಟಾಚಾರಗಳಲ್ಲಿ ರಾಜಿ ಬೇಡ: ನೀಟ್ ಮರು ಪರೀಕ್ಷೆಯತ್ತ ಕೇಂದ್ರ ಸರಕಾರದ ಚಿತ್ತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ದೇಶದಲ್ಲಿ ದೊಡ್ಡ ಸಂಚಲನವನ್ನೇ ಸೃಸ್ಟಿಸಿದ್ದು, ಈ ಬೆನ್ನಲ್ಲೇ ಎಚ್ಚೆತ್ತ ಕೇಂದ್ರ ಸರಕಾರವು ಮರು ಪರೀಕ್ಷೆಯತ್ತ ಗಮನಹರಿಸಿದೆ.

ಈಗಾಗಲೇ ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆಯ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದ್ದು, ಪ್ರಮುಖ ಆರೋಪಿಗಳನ್ನು ಬಂಧಿಸಿದೆ.

ಬಿಗಿ ಭದ್ರತೆಗೆ ಸೂಚನೆ

ಇದರ ನಡುವೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಅಧ್ಯಕ್ಷತೆಯಲ್ಲಿ ಇಂದು ಮರು ಪರೀಕ್ಷೆಯ ಕುರಿತು ಪರಿಶೀಲನಾ ಸಭೆ ನಡೆಯಿತು. ಈ ವೇಳೆ ಪರೀಕ್ಷೆ ಸಮಯದಲ್ಲಿ ಬಿಗಿ ಭದ್ರತೆ, ಸಿಸಿಟಿವಿ ಕಣ್ಗಾವಲು ಮತ್ತು ಪಾರದರ್ಶಕತೆಗೆ ಹೆಚ್ಚಿನ ಆದ್ಯತೆ ನೀಡಲು ಸೂಚನೆಗಳನ್ನು ನೀಡಲಾಯಿತು.

ಭದ್ರತಾ ಶಿಷ್ಟಾಚಾರಗಳಲ್ಲಿ ರಾಜಿ ಬೇಡ

ನೀಟ್ ಮರು ಪರೀಕ್ಷೆಯನ್ನು ಯಾವುದೇ ರೀತಿಯ ಗೊಂದಲ ಉಂಟಾಗದಂತೆ ನೋಡಿಕೊಳ್ಳಬೇಕು. ಕಟ್ಟುನಿಟ್ಟಾದ ಭದ್ರತಾ ಶಿಷ್ಟಾಚಾರಗಳ ನಡುವೆ ಶಿಸ್ತುಬದ್ಧವಾಗಿ ನಡೆಸಬೇಕು ಎಂದು ಸಚಿವ ಧರ್ಮೇಂದ್ರ ಪ್ರಧಾನ್ ಆದೇಶಿಸಿದ್ದಾರೆ.

ರಾಜ್ಯಗಳ ಜೊತೆ ಸಭೆ ನಡೆಸಲು ಸೂಚನೆ

ಪರೀಕ್ಷಾ ವ್ಯವಸ್ಥೆಗಳನ್ನು ಕಟ್ಟುನಿಟ್ಟಾಗಿ ನಡೆಸಲು ಮತ್ತು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ರಾಜ್ಯಗಳಾದ್ಯಂತ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸಮನ್ವಯ ಸಭೆಗಳನ್ನು ನಡೆಸಲು ಆದೇಶ ನೀಡಿದ್ದಾರೆ.

ಇದಲ್ಲದೆ, ಸಾರಿಗೆ, ಕುಡಿಯುವ ನೀರು ಮತ್ತು ಇತರ ಅಗತ್ಯ ಸೌಲಭ್ಯಗಳು ಸೇರಿದಂತೆ ವಿದ್ಯಾರ್ಥಿಗಳಿಗೆ ಬೇಕಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಯಾವುದೇ ಆತಂಕ ಇಲ್ಲದೆ ಪರೀಕ್ಷೆ ನಡೆಯಬೇಕು ಎಂದು ಸೂಚನೆ ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !