ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೀನಾ ಮತ್ತು ಪಾಕಿಸ್ತಾನದ ಜಂಟಿ ಹೇಳಿಕೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಉಲ್ಲೇಖ ‘ಅನಗತ್ಯ’ ಎಂದು ವಿದೇಶಾಂಗ ಸಚಿವಾಲಯವು ಗುರುವಾರ ಹೇಳಿದೆ.
07 ಜೂನ್ 2024 ರ ಚೀನಾ ಮತ್ತು ಪಾಕಿಸ್ತಾನದ ನಡುವಿನ ಜಂಟಿ ಹೇಳಿಕೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದ ಬಗ್ಗೆ ಅನಗತ್ಯ ಉಲ್ಲೇಖಗಳನ್ನು ನಾವು ಗಮನಿಸಿದ್ದೇವೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಹೊರಡಿಸಿದ ಹೇಳಿಕೆ ತಿಳಿಸಿದೆ.
ನಾವು ಅಂತಹ ಉಲ್ಲೇಖಗಳನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತೇವೆ. ಈ ವಿಷಯದಲ್ಲಿ ನಮ್ಮ ನಿಲುವು ಸ್ಥಿರವಾಗಿದೆ, ಇದು ಸಂಬಂಧಪಟ್ಟ ದೇಶಗಳಿಗೆ ಚೆನ್ನಾಗಿ ತಿಳಿದಿದೆ ಎಂದು ಸಚಿವಾಲಯ ಹೇಳಿದೆ.
ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗಗಳಾಗಿವೆ. ಅದು ಯಾವಾಗಲೂ ಹಾಗೆಯೇ ಉಳಿಯುತ್ತದೆ. ಇದರ ಬಗ್ಗೆ ಪ್ರತಿಕ್ರಿಯಿಸಲು ಯಾವುದೇ ದೇಶಕ್ಕೆ ಯೋಗ್ಯತೆ ಇಲ್ಲ ಎಂದು ಎಂಇಎ ಹೇಳಿದೆ.
ಪಾಕಿಸ್ತಾನ ಮತ್ತು ಚೀನಾದ ಜೂನ್ 7 ರ ಜಂಟಿ ಹೇಳಿಕೆಯು ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಅಡಿಯಲ್ಲಿನ ಚಟುವಟಿಕೆಗಳು ಮತ್ತು ಯೋಜನೆಗಳನ್ನು ಉಲ್ಲೇಖಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.’ಅದೇ ಜಂಟಿ ಹೇಳಿಕೆಯು ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಎಂದು ಕರೆಯಲ್ಪಡುವ ಚಟುವಟಿಕೆಗಳು ಮತ್ತು ಯೋಜನೆಗಳನ್ನು ಉಲ್ಲೇಖಸಿದ್ದ ಅವುಗಳಲ್ಲಿ ಕೆಲವು ಭಾರತದ ಸಾರ್ವಭೌಮ ಪ್ರದೇಶದ ಅಡಿಯಲ್ಲಿ ಪಾಕಿಸ್ತಾನದಿಂದ ಬಲವಂತವಾಗಿ ಮತ್ತು ಅಕ್ರಮವಾಗಿ ವಶಪಡಿಸಿಕೊಂಡಿವೆ’ ಎಂದು ಹೇಳಿದೆ.
ಭಾರತದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯ ಮೇಲೆ ಪ್ರಭಾವ ಬೀರುವ ಈ ಪ್ರದೇಶಗಳ ಪಾಕಿಸ್ತಾನದ ಅಕ್ರಮ ಆಕ್ರಮವನ್ನು ಬಲಪಡಿಸಲು ಅಥವಾ ಕಾನೂನುಬದ್ಧಗೊಳಿಸಲು ಇತರ ದೇಶಗಳ ಯಾವುದೇ ಕ್ರಮಗಳನ್ನು ನಾವು ದೃಢವಾಗಿ ವಿರೋಧಿಸುತ್ತೇವೆ ಮತ್ತು ತಿರಸ್ಕರಿಸುತ್ತೇವೆ’ ಎಂದು ಭಾರತ ಹೇಳಿದೆ.
ಜೂನ್ 7 ರಂದು ತಮ್ಮ ಜಂಟಿ ಹೇಳಿಕೆಯಲ್ಲಿ, ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಚೀನಾದ ಕಡೆಯಿಂದ ವಿವರಿಸಲಾಗಿದೆ ಎಂದು ಪಾಕಿಸ್ತಾನ ಹೇಳಿತ್ತು.