ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಳ್ಳಾರಿಯಲ್ಲಿ ನಡೆಯಲಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳುವ ಕುರಿತು ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಎಂದು ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ತಿಳಿಸಿದರು. ಮೈಸೂರಿನಲ್ಲಿ ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಈ ಬಗ್ಗೆ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ (ಕಸಾಪ) ನಡೆಯುತ್ತಿರುವ ಅವ್ಯವಹಾರದ ಕುರಿತು ಸರ್ಕಾರ ತನಿಖೆಗೆ ಆದೇಶಿಸಿದ್ದು, ಕಸಾಪ ರಾಜ್ಯಾಧ್ಯಕ್ಷರ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದಿವೆ. ಈ ಹಿನ್ನೆಲೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಬೇಕೆ ಅಥವಾ ಬೇಡವೆಂಬ ಪ್ರಶ್ನೆ ನನ್ನ ಮುಂದಿದೆ ಎಂದು ಅವರು ಹೇಳಿದ್ದಾರೆ. ಕಸಾಪ ಅಂದರೆ ಒಂದೇ ವ್ಯಕ್ತಿ ಅಲ್ಲ, ಎಲ್ಲಾ ಜಿಲ್ಲೆಗಳ ಅಧ್ಯಕ್ಷರು ಸೇರಿರುವ ಸಂಘಟನೆಯಾಗಿದೆ. ಹೀಗಾಗಿ ಈ ಸ್ಥಾನವನ್ನು ತೆಗೆದುಕೊಳ್ಳುವುದು ಸೂಕ್ತವೋ ಇಲ್ಲವೋ ಎಂಬ ಬಗ್ಗೆ ಇನ್ನೂ ಚಿಂತನೆಯಲ್ಲಿದ್ದೇನೆ ಎಂದರು.
ಹಾವೇರಿಯಲ್ಲಿ ನಡೆದಿದ್ದ ಹಿಂದಿನ ಸಮ್ಮೇಳನದಲ್ಲಿ ಅಲ್ಪಸಂಖ್ಯಾತರ ಗೋಷ್ಠಿಗೆ ಅವಕಾಶ ನೀಡದ ಅಧ್ಯಕ್ಷರೇ ಈ ಬಾರಿ ಸರ್ವಾಧ್ಯಕ್ಷರಾಗಿ ತಮ್ಮನ್ನು ಆಹ್ವಾನಿಸಿರುವುದನ್ನು ಉಲ್ಲೇಖಿಸಿದ ಅವರು, ಇದು ಅವರ ಮನೋಭಾವದ ಬದಲಾವಣೆಯಾ ಅಥವಾ ಸಾಮಾಜಿಕ ಒತ್ತಡದ ಪರಿಣಾಮವೋ ಅಥವಾ ಸಮಯದ ಅನಿವಾರ್ಯತೆಯೋ ಎನ್ನುವುದು ಸ್ಪಷ್ಟವಾಗಬೇಕು ಎಂದು ಅಭಿಪ್ರಾಯಪಟ್ಟರು.
ಸಮ್ಮೇಳನದ ಆಯ್ಕೆ ಪ್ರಜಾಸತ್ತಾತ್ಮಕವಾಗಿ ನಡೆದಿದ್ದು, ಆ ಆಹ್ವಾನಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಇದೇ ವೇಳೆ ಮೈಸೂರಿನಲ್ಲಿ ದಸರಾ ಉದ್ಘಾಟನೆಗೆ ಅವರನ್ನು ಆಹ್ವಾನಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಕೂಸು ಹುಟ್ಟುವ ಮೊದಲೇ ಹೆಸರಿಡೋದು ಬೇಡ, ಮುಖ್ಯಮಂತ್ರಿಗಳ ನಿರ್ಧಾರಕ್ಕೆ ಕಾಯೋಣ” ಎಂದು ಹಾಸ್ಯಶೈಲಿಯಲ್ಲಿ ಉತ್ತರಿಸಿದರು.