October 18, 2026
Sunday, October 18, 2026
spot_img

NEET ಹೆಸರಲ್ಲಿ ಸುಳ್ಳು ಭರವಸೆ ಬೇಡ: ರಾಜ್ಯದ ಸ್ವಾಯತ್ತತೆಗಾಗಿ ಟಿವಿಕೆ ಧ್ವನಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರಮಟ್ಟದಲ್ಲಿ ನೀಟ್ (NEET) ಪರೀಕ್ಷೆಯ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ವಿದ್ಯಾರ್ಥಿಗಳ ಪ್ರತಿಭಟನೆ ಬಿಸಿಯೇರುತ್ತಿರುವ ಬೆನ್ನಲ್ಲೇ, ತಮಿಳುನಾಡಿನ ತಮಿಳಗ ವೆಟ್ರಿ ಕಳಗಂ ಪಕ್ಷ ತನ್ನ ಸ್ಪಷ್ಟ ನಿಲುವು ವ್ಯಕ್ತಪಡಿಸಿದೆ. ಪರೀಕ್ಷೆಯಲ್ಲಿ ಕೇವಲ ಸುಧಾರಣೆ ತರುವುದಲ್ಲ, ಬದಲಾಗಿ ನೀಟ್ ಅನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಎಂದು ಟಿವಿಕೆ ಆಗ್ರಹಿಸಿದೆ.

ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅಧಿಕಾರ: ರಾಜ್ಯ ಪಟ್ಟಿಗೆ ಸೇರಿಸಲು ಮನವಿ

ಮಂಗಳವಾರ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ, ವೈದ್ಯಕೀಯ ಶಿಕ್ಷಣ ಸೇರಿದಂತೆ ಇಡೀ ಶಿಕ್ಷಣ ಕ್ಷೇತ್ರವನ್ನು ಕೇಂದ್ರದ ‘ಸಮವರ್ತಿ ಪಟ್ಟಿ’ಯಿಂದ ತೆಗೆದು ‘ರಾಜ್ಯ ಪಟ್ಟಿ’ಗೆ ಸೇರಿಸಬೇಕೆಂದು ಟಿವಿಕೆ ಒತ್ತಾಯಿಸಿದೆ. ಇದಕ್ಕೆ ಕಾನೂನು ಅಡಚಣೆಗಳಿದ್ದರೆ, ಮಧ್ಯಂತರ ಪರಿಹಾರವಾಗಿ ‘ವಿಶೇಷ ಸಮವರ್ತಿ ಪಟ್ಟಿ’ ರಚಿಸಿ ರಾಜ್ಯ ಸರ್ಕಾರಗಳಿಗೆ ವೈದ್ಯಕೀಯ ಪ್ರವೇಶಾತಿ ನಿರ್ಧಾರಗಳಲ್ಲಿ ಪೂರ್ಣ ಅಧಿಕಾರ ನೀಡಬೇಕು ಎಂದು ಪಕ್ಷ ಸಲಹೆ ನೀಡಿದೆ.

ರಾಜಕೀಯ ವಿರೋಧಿಗಳಿಗೆ ಪರೋಕ್ಷ ತಿರುಗೇಟು

ಡಿಎಂಕೆ ಪಕ್ಷದ ಹೆಸರನ್ನು ನೇರವಾಗಿ ಉಲ್ಲೇಖಿಸದ ಟಿವಿಕೆ, “ನಾವು ಅಧಿಕಾರಕ್ಕೆ ಬಂದರೆ ನೀಟ್ ರದ್ದುಗೊಳಿಸುತ್ತೇವೆ ಎಂದು ಚುನಾವಣೆ ಸಮಯದಲ್ಲಿ ಸುಳ್ಳು ಭರವಸೆ ನೀಡಿ ಮತ ಪಡೆಯುವ ತಂತ್ರ ಹೆಣೆಯುವುದಿಲ್ಲ” ಎಂದು ಪರೋಕ್ಷವಾಗಿ ಟೀಕಿಸಿದೆ. ರಾಜ್ಯಗಳ ಶೈಕ್ಷಣಿಕ ಹಕ್ಕುಗಳನ್ನು ಮರಳಿ ಪಡೆಯುವುದೇ ಈ ಸಮಸ್ಯೆಗೆ ಶಾಶ್ವತ ಪರಿಹಾರ ಎಂದು ನಟ ಹಾಗೂ ಟಿವಿಕೆ ಮುಖ್ಯಸ್ಥ ವಿಜಯ್ ಸ್ಪಷ್ಟಪಡಿಸಿದ್ದಾರೆ.

Must Read