ಹೊಸದಿಗಂತ ಡಿಜಿಟಲ್ ಡೆಸ್ಕ್;
ಬಾಲಿವುಡ್ನ ಖ್ಯಾತ ನಟ ಸೈಫ್ ಅಲಿ ಖಾನ್ ಅವರು ತಮ್ಮ ಹಾಸ್ಯಭರಿತ ಮಾತುಗಳಿಂದ ಮತ್ತೊಮ್ಮೆ ಅಭಿಮಾನಿಗಳನ್ನು ರಂಜಿಸಿದ್ದಾರೆ. ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಜನಪ್ರಿಯ ಗೇಮ್ ಶೋ ‘ಕೌನ್ ಬನೇಗಾ ಕರೋಡ್ಪತಿ’ ಕಾರ್ಯಕ್ರಮಕ್ಕೆ ತೆರಳಿದ್ದ ಸೈಫ್ ಅಲಿ ಖಾನ್, ಅಲ್ಲಿ ಜಯಗಳಿಸಿದ್ದ ಎರಡು ವರ್ಷದ ಉಚಿತ ತುಪ್ಪದ ಬಹುಮಾನ ಮತ್ತು ಚೆಕ್ ಇದುವರೆಗೆ ತಮಗೆ ತಲುಪಿಲ್ಲ ಎಂದು ಹಾಸ್ಯಮಯವಾಗಿ ಆರೋಪಿಸಿದ್ದಾರೆ. ನೆಟ್ಫ್ಲಿಕ್ಸ್ನಲ್ಲಿ ಪ್ರಸಾರವಾಗುವ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಕಾರ್ಯಕ್ರಮದಲ್ಲಿ ಪತ್ನಿ ಕರೀನಾ ಕಪೂರ್ ಜೊತೆ ಅತಿಥಿಯಾಗಿ ಭಾಗವಹಿಸಿದ್ದ ವೇಳೆ ಈ ಮೋಜಿನ ಪ್ರಸಂಗ ನಡೆದಿದೆ.
ಕಪಿಲ್ ಶರ್ಮಾ ತಮ್ಮದೇ ಶೈಲಿಯಲ್ಲಿ ಸೈಫ್ ಅಲಿ ಖಾನ್ ಅವರ ಇನ್ಸ್ಟಾಗ್ರಾಮ್ ಬಗ್ಗೆ ಕಾಲೆಳೆದರು. ಸೈಫ್ ಅವರಿಗೆ ಎರಡು ವರ್ಷಗಳ ಕಾಲ ಉಚಿತ ತುಪ್ಪ ಸಿಕ್ಕ ಖುಷಿಯಲ್ಲೇ ಅವರು ಇನ್ಸ್ಟಾಗ್ರಾಮ್ಗೆ ಎಂಟ್ರಿ ಕೊಟ್ಟಿದ್ದಾರೆ ಎಂದು ಓದುಗರೊಬ್ಬರ ಕಾಮೆಂಟ್ ಅನ್ನು ಕಪಿಲ್ ಓದಿ ಹೇಳಿದರು. ಇದನ್ನು ಕೇಳಿ ಪತ್ನಿ ಕರೀನಾ ಕಪೂರ್ ಜೋರಾಗಿ ನಕ್ಕು ಪತಿಯ ಕಾಲೆಳೆದರು.
ಈ ಹಾಸ್ಯಮಯ ಚಟಾಕಿಗೆ ತಕ್ಷಣ ಪ್ರತಿಕ್ರಿಯಿಸಿದ ಸೈಫ್ ಅಲಿ ಖಾನ್, “ನಾನು ಒಂದು ವಿಷಯವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ನನಗೆ ಇದುವರೆಗೆ ಆ ತುಪ್ಪವೇ ಸಿಕ್ಕಿಲ್ಲ!” ಎಂದು ನಗುತ್ತಾ ಹೇಳಿದರು. ಅಷ್ಟೇ ಅಲ್ಲದೆ, “ನನ್ನ ಚೆಕ್ ಕೂಡ ಇನ್ನೂ ಬಂದಿಲ್ಲ” ಎಂದು ಅವರು ಜೋಕ್ ಮಾಡಿದ್ದನ್ನು ಕೇಳಿ ಸ್ಟುಡಿಯೋದಲ್ಲಿದ್ದ ಕಪಿಲ್ ಶರ್ಮಾ, ಅರ್ಚನಾ ಪೂರನ್ ಸಿಂಗ್ ಹಾಗೂ ಪ್ರೇಕ್ಷಕರು ಬಿದ್ದು ಬಿದ್ದು ನಕ್ಕರು.
ಈ ಕಾರ್ಯಕ್ರಮದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ನೆಟಿಗರು ಬಗೆಬಗೆಯ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. “ಯಾರಾದರೂ ದಯವಿಟ್ಟು ಅವರಿಗೆ ತುಪ್ಪ ತಲುಪಿಸಿ” ಎಂದು ಅಭಿಮಾನಿಯೊಬ್ಬರು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು, “ಸೈಫ್ ಅಲಿ ಖಾನ್ ಅವರಿಗೇ ಒಂದು ಸ್ವಂತ ಶೋ ಇರಬೇಕು” ಎಂದಿದ್ದಾರೆ. ಒಟ್ಟಿನಲ್ಲಿ ಸೈಫ್ ಅವರ ಈ ಮುಗ್ಧ ಹಾಗೂ ಸಹಜ ಹಾಸ್ಯಪ್ರವೃತ್ತಿ ಮತ್ತೊಮ್ಮೆ ಎಲ್ಲರ ಮನಗೆದ್ದಿದೆ.



