ಹೊಸದಿಗಂತ ಡಿಜಿಟಲ್ ಡೆಸ್ಕ್:
ಭದ್ರತಾಪಡೆಗಳ ಜೊತೆ ನಡೆದ ಕಾಳಗದಲ್ಲಿ ಹತನಾದ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಉಗ್ರ ಸಂಘಟನೆಯ ಕಮಾಂಡರ್‌ನ ಅಂತ್ಯಕ್ರಿಯೆಯ ಮುಂದಾಳತ್ವ, ಅಂತಿಮ ಪ್ರಾರ್ಥನೆ ಸಲ್ಲಿಸಲು ಅಲ್ಲಿನ ಮೌಲ್ವಿಗಳು ನಿರಾಕರಿಸಿದ್ದಾರೆ.
ಖೈಬರ್ ಪಂಖ್ತುಕ್ವಾ ಪ್ರಾಂತ್ಯದ ಉತ್ತರ ವಜಿರಿಸ್ತಾನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗಿನ ಘರ್ಷಣೆಯಲ್ಲಿ ಟಿಟಿಪಿ ಉಗ್ರ ಸಂಘಟನೆಯ ಕಮಾಂಡರ್ ಮಿನ್ಹಾಜ್ ಸಾವನ್ನಪ್ಪಿದ್ದ. ಆತನ ಅಂತ್ಯಕ್ರಿಯೆ ನಡೆಸಬೇಕಾದಾಗ ಅಲ್ಲಿನ ಮೌಲ್ವಿಗಳು ದೇಶ ವಿರೋಧಿಗಳಿಗಾಗಿ ತಾವು ಪ್ರಾರ್ಥಿಸುವುದಿಲ್ಲ ಎಂದು ಹೇಳಿ ಅಂತಿಮ ವಿಧಿವಿಧಾನದ ನೇತೃತ್ವ ವಹಿಸಲು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಬಳಿಕ ಒಂದಷ್ಟು ಜನರು ಸೇರಿ ಅನಿವಾರ್ಯವಾಗಿ ಶವವನ್ನು ದಫನ ಮಾಡಿದ್ದಾರೆ.
ಅಮಾಯಕ ಜೀವಗಳನ್ನು ಬಲಿಪಡೆದವರು ಹಾಗೂ ದೇಶದ ವಿರುದ್ಧವೇ ಹೋರಾಡುವ ವ್ಯಕ್ತಿಗಳಿಗೆ ನಾವು ಒಳಿತು ಬಯಸುವುದಿಲ್ಲ. ಅಂಥ ಪ್ರಾರ್ಥನೆಯೇ ನಿರರ್ಥಕ ಎಂದು ಮೌಲ್ವಿಗಳು ಆಕ್ರೋಶ ವ್ಯಕ್ತಪಡಿಸಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.