ಹೊಸದಿಗಂತ ವರದಿ, ಶಿವಮೊಗ್ಗ :
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂಬ ಬಿಜೆಪಿ ಆರೋಪ ಶುದ್ಧ ಸುಳ್ಳು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಅನಗತ್ಯ ಆರೋಪವನ್ನು ಬಿಜೆಪಿ ಮಾಡುತ್ತಿದೆ. ಯಾವುದೇ ಗೂಂಡಾ ಆರೋಪಿಯನ್ನೂ ಬಿಡಲ್ಲ. ಅದನ್ನು ಹತ್ತಿಕ್ಕುವ ಕೆಲಸ ಸರ್ಕಾರ ಮಾಡಲಿದೆ. ಯಾವ ಕಾನೂನು ಸುವ್ಯವಸ್ಥೆ ಕೆಟ್ಟಿದೆ? ಹತ್ಯೆ ಯಾವ ಕಾರಣಕ್ಕೆ ಆಗಿದೆ? ಹಿಂದೆ ಕಮ್ಯುನಲ್ ಮರ್ಡರ್ ಆಗುತ್ತಿತ್ತು. ಈಗ ಆಗಿಲ್ಲ. ರಂಜಾನ್, ಗಣಪತಿ ಹಬ್ಬದ ಸಂದರ್ಭದಲ್ಲಿ ಗಲಾಟೆ ಆಗಿಲ್ಲ ಎಂದು ತಿರುಗೇಟು ನೀಡಿದರು.
ಬಿಜೆಪಿ ಆಡಳಿತದ ಅವಯಲ್ಲಿ ಆದ ಕೊಲೆ, ಈ ಅವಧಿಯಲ್ಲಿ ಎಷ್ಟು ಕೊಲೆ ಆಗಿದೆ ಎಂದು ಲೆಕ್ಕ ಕೊಡುತ್ತೇನೆ. ಸೈಬರ್ ಕ್ರೈಮ್ ಹೆಚ್ಚಳ ಆಗಿದೆ ಅಷ್ಟೇ. ಹಿಂದೆ ಸೆನ್ ಸ್ಟೇಷನ್ ಇರಲಿಲ್ಲ. ಈಗ 45 ಠಾಣೆ ಆಗಿದೆ. ಇದರಿಂದ ದೂರು ಹೆಚ್ಚಳ ಆಗಿದೆ. ಪೊಲೀಸ್ ಠಾಣೆಗೆ ಯಾರೇ ಬಂದು ದೂರು ಕೊಟ್ಟರೂ ಎಫ್‌ಐಅರ್ ಮಾಡುತ್ತೇವೆ. ಎಲ್ಲಾ ಕಾಲದಲ್ಲೂ ಪೊಲೀಸ್ ಮೇಲೆ ಹಲ್ಲೆ ಆಗಿದೆ. ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆ ಇಲ್ಲ. ಚನ್ನಗಿರಿ ಪ್ರಕರಣದಲ್ಲಿ 25 ಮಂದಿ ಬಂಧನ ಆಗಿದೆ ಎಂದು ತಿಳಿಸಿದರು.