ಜೈಲಿನ ಕೈದಿಗಳ ದಿನಗೂಲಿ ಹೆಚ್ಚಳ ಮಾಡಿಲ್ಲ: ಗೃಹ ಸಚಿವರ ಸ್ಪಷ್ಟೀಕರಣ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಜೈಲಿನಲ್ಲಿರುವ ಕೈದಿಗಳಿಗೆ ದಿನಗೂಲಿ ಏರಿಕೆ ಮಾಡಿದ್ದಾರೆ ಎಂಬ ವಿಷಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಮನಬಂದಂತೆ ವ್ಯಂಗ್ಯ ಚಿತ್ರಣ, ಮೀಮ್ ಮಾಡುವುದು, ಬರಹಗಳನ್ನು ಹಾಕಿದ್ದಾರೆ. ಕೈದಿಗಳ ದಿನಗೂಲಿಯನ್ನ 525 ರೂ.ಗಳಿಗೆ ಏರಿಸಿದ್ದು ಬೇರೆ ಉದ್ಯೋಗಗಳಿಗಿಂತ ಜೈಲುವಾಸವೇ ಲಾಭದಾಯಕ ಎಂಬಂತೆ ಹಲವರು ಗೇಲಿ ಮಾಡಿ ಹರಿಬಿಟ್ಟಿರುವುದು ಕಂಡುಬಂದಿದೆ.
ಈ  ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟೀಕರಣ ನೀಡಿದ್ದು, ರಾಜ್ಯದಲ್ಲಿ ಸುಮಾರು ಹದಿನೈದು ಸಾವಿರ ಕೈದಿಗಳು ಜೈಲುವಾಸ ಅನುಭವಿಸುತ್ತಿದ್ದಾರೆ. ಜೈಲುವಾಸದಲ್ಲಿರುವ ಕೈದಿಗಳಿಗೆ ಕೂಲಿ ಹಣವನ್ನು 200 ರೂ.ಗಳಿಂದ ಸ್ವಲ್ಪ ಹೆಚ್ಚಿಗೆ ಮಾಡುವ ಕುರಿತು ಪ್ರಸ್ತಾವನೆ ಮಾಡಲಾಗಿದೆಯೇ ಹೊರತೂ ಅಂತಹ ಆದೇಶ ಇದುವರೆಗೂ ಹೊರಡಿಸಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಜೈಲು ಶಿಕ್ಷೆಯಲ್ಲಿರುವ ಹಲವು ಕೈದಿಗಳಿಂದ ಪ್ರತಿದಿನ ಕೆಲಸಕಾರ್ಯಗಳನ್ನು, ದುಡಿಮೆ ಮಾಡಿಸಲಾಗುತ್ತಿದ್ದು, ಪ್ರತಿಯೊಬ್ಬ ಕೈದಿಯೂ ಕೆಲಸ ಮಾಡಬೇಕಾಗುತ್ತದೆ. ವಿವಿಧ ಕೆಲಸಗಳ ಮೂಲಕ ಕೈದಿಗಳ ಖಿನ್ನತೆ ಹೋಗಲಾಡಿಸಿ ಅವರ ಮನಃಪರಿವರ್ತನೆ ಮಾಡುವುದು ಇದರ ಉದ್ದೇಶ.
ಈ ಮೂಲಕ ಇಲಾಖೆಗೆ ಆದಾಯವೂ ಬರುತ್ತಿದೆ. ಆದರೆ, ಶಿಕ್ಷೆಯಲ್ಲಿರುವ ಕೈದಿಗಳಿಗೆ ಈಗಲೂ ಕೊಡುತ್ತಿರುವುದು ದಿನಕ್ಕೆ 200 ರೂ.ಗಳು. ಅದರಲ್ಲಿ ಊಟದ ಖರ್ಚು 100 ರೂ.ಗಳನ್ನು ಸಹಾ ಕಳೆಯಲಾಗುತ್ತಿದೆ. ಕೈದಿಯಾದ ಮಾತ್ರಕ್ಕೆ ಆತನಿಂದ ಜೀತ ಮಾಡಿಸಿಕೊಳ್ಳುವ ಹಕ್ಕು ಯಾವ ಸರ್ಕಾರಕ್ಕೂ ಇಲ್ಲ.ಈ ಕಾರಣದಿಂದ ಅವರಿಂದಲೇ ಬರುತ್ತಿರುವ ಲಾಭ ಬಳಸಿ ಅವರಿಗೆ ಸ್ವಲ್ಪ ಕೂಲಿ ಹೆಚ್ಚಿಸುವ ಯೋಚನೆ ಮಾಡಲಾಗಿದೆ ಅಷ್ಟೇ. ಕೈದಿಗಳ ಕೂಲಿ ಹೆಚ್ಚಿಸುವ ಆದೇಶ ಇನ್ನೂ ಜಾರಿಯಾಗಿಲ್ಲ. ಆದರೆ, ಹಲವರು ಕೈದಿಗಳ ಸಂಬಳ ಶಿಕ್ಷಕರ ವೃತ್ತಿಗಿಂತಲೂ ಲೇಸು ಎಂದು ಎಲ್ಲೆಡೆ ಸುದ್ದಿ ಹರಡುತ್ತಿರುವುದು ತಿಳಿದು ಬಂದಿದೆ. ಹಾಗಾಗಿ ಈ ಬಗ್ಗೆ ಮೇಲಿನ ಸ್ಪಷ್ಟೀಕರಣ ನೀಡಿದ್ದೇನೆ ಎಂದು ಗೃಹ ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!