ಸರ್ಕಾರ ಯಾವುದೇ ಇರಲಿ, ಕ್ಷೇತ್ರದ ಅಭಿವೃದ್ಧಿಗೆ ಏನು ಮಾಡಬೇಕೋ ಎಲ್ಲಾ ಕಾರ್ಯಗಳ ಮಾಡುತ್ತೇನೆ: ಹೆಬ್ಬಾರ್‌

ಹೊಸ ದಿಗಂತ ವರದಿ, ಯಲ್ಲಾಪುರ:

ಅಭಿವೃದ್ಧಿಯಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂಬುದಕ್ಕೆ ಈ ಬಾರಿಯ ಚುನಾವಣೆ ಸಾಕ್ಷಿಯಾಗಿದೆ. ಆದರೂ ಸಹ ಎಲ್ಲ ಸವಾಲುಗಳನ್ನು ಎದುರಿಸಿ ನಿಂತು ನಾಲ್ಕನೇ ಬಾರಿ ಕ್ಷೇತ್ರದ ಶಾಸಕನಾಗಿರುವುದು ಸತ್ಯ. ಯಾವುದೇ ಸರ್ಕಾರವಿರಲಿ ಕ್ಷೇತ್ರದ ಅಭಿವೃದ್ಧಿಗೆ ಏನು ಮಾಡಬೇಕೋ ಎಲ್ಲಾ ಕಾರ್ಯಗಳನ್ನು ಮಾಡಿಯೇ ತೀರುತ್ತೇನೆ ಎಂದು ಶಾಸಕ ಶಿವರಾಮ ಹೆಬ್ಬಾರ್‌ ಹೇಳಿದರು.

ಪಟ್ಟಣದ ಐಬಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿಯ ಚುನಾವಣೆಗೆ ಹೋಲಿಸಿದರೆ 6 ಸಾವಿರ ಕಡಿಮೆ ಮತ ಬಿಜೆಪಿಗೆ ದೊರೆತಿದೆ. ಈ ಏರಿಳಿತಗಳು ಚುನಾವಣೆಯಲ್ಲಿ ಸರ್ವೇ ಸಾಮಾನ್ಯ. ಒಮ್ಮೆ ಹೆಚ್ಚು ಒಮ್ಮೆ ಕಡಿಮೆ. ಆದರೂ ಸಹ ಬಹುಜನರ ವಿಶ್ವಾಸಗಳಿಸಿ ಶಾಸಕನಾಗಿದ್ದೇನೆ. ರಾಜ್ಯದೆಲ್ಲೆಡೆ ಎದ್ದಿರುವ ಕಾಂಗ್ರೆಸ್‌ ಗಾಳಿ ಈ ಸಲ ನಮ್ಮ ಕ್ಷೇತ್ರದಲ್ಲೂ ಸಹಜವಾಗಿಯೇ ಪ್ರಭಾವ ಬೀರಿದೆ ಎಂದರು.

ನಾನು ಈ ಹಿಂದೆ ಮೂರು ಬಾರಿಯೂ ಆಡಳಿತ ಪಕ್ಷದ ಶಾಸಕನಾಗಿ ಕಾರ್ಯನಿರ್ವಹಿಸಿದ್ದೇನೆ. ಈ ಬಾರಿ ಬದಲಾವಣೆ ಎಂಬುವಂತೆ ವಿರೋಧ ಪಕ್ಷದಲ್ಲಿದ್ದು ಕಾರ್ಯ ನಿರ್ವಹಿಸುತ್ತೇನೆ. ಕ್ಷೇತ್ರದ ಅಭಿವೃದ್ಧಿಯ ಪ್ರಶ್ನೆ ಬಂದಾಗ ಹಲವರು ವಿರೋಧ ಪಕ್ಷದಲ್ಲಿದ್ದೂ ಕೆಲಸ ಮಾಡಿಸಿಕೊಳ್ಳುತ್ತಾರೆ ಎಂದರು.

ಈ ಬಾರಿಯ ಚುನಾವಣೆಯು ಶಾಂತಿ, ಸೌಹಾರ್ದತೆಯಿಂದ ನಡೆದಿದೆ. ಚುನಾವಣೆ ಹೇಗೆ ನಡೆಯಬೇಕು ಎಂಬುದಕ್ಕೆ ನಮ್ಮ ಕ್ಷೇತ್ರ ಉದಾಹರಣೆಯಾಗಿದೆ. ಇದಕ್ಕಾಗಿ ನಾನು ಎಲ್ಲಾ ಪಕ್ಷದ ಕಾರ್ಯಕರ್ತರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಈ ರೀತಿಯಲ್ಲಿ ಚುನಾವಣೆಗಳು ನಡೆದಾಗ ಜನರಿಗೂ ಸಹ ಪ್ರಜಾಪ್ರಭುತ್ವದಲ್ಲಿ ವಿಶ್ವಾಸ ಉಳಿಯುತ್ತದೆ. ನನ್ನ ಗೆಲುವಿಗೆ ಕಾರಣೀಭೂತರಾದ ಪಕ್ಷದ ಎಲ್ಲಾ ಕಾರ್ಯಕರ್ತರು, ಕ್ಷೇತ್ರದ ಮತದಾರರಿಗೂ ಈ ಮೂಲಕ ಧನ್ಯವಾದ ಸಲ್ಲಿಸಲು ಇಚ್ಛಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಪ.ಪಂ. ಅಧ್ಯಕ್ಷೆ ಸುನಂದಾ ದಾಸ್‌, ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ್‌, ಪ್ರಮುಖರಾದ ಉಮೇಶ್‌ ಭಾಗ್ವತ್‌, ಶಿರೀಶ್‌ ಪ್ರಭು, ರಾಮು ನಾಯ್ಕ, ಮುರುಳಿ ಹೆಗಡೆ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!