ಹೊಸದಿಗಂತ ವರದಿ,ಮಂಡ್ಯ :
ಎಚ್.ಡಿ.ಕುಮಾರಸ್ವಾಮಿ ಅವರು ಬಾಯಿ ಚಪಲಕ್ಕೆ, ಚಟಕ್ಕೆ ಮಾತನಾಡುತ್ತಾರೆ. ಅಂತಹ ಮಾತುಗಳಿಗೆ ಉತ್ತರ ಕೊಡಬೇಕೆನಿಸುವುದೇ ಇಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ತಾಲೂಕಿನ ಕೆರಗೋಡು ಗ್ರಾಮದಲ್ಲಿ ಪೊಲೀಸ್ ನಿರೀಕ್ಷಕರ ಕಚೇರಿ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಜನರ ತೀರ್ಮಾನವೇ ಅಂತಿಮ ಎಂದು ನಾವು ನಂಬಿದ್ದೇವೆ. ಅದನ್ನು ಹೆಚ್ಡಿಕೆ ನಂಬುತ್ತಾರಾ. ಕಳೆದ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಎಲ್ಲಾ ಸರ್ವೆಗಳನ್ನು ಮೀರಿ ಜನರು ಕಾಂಗ್ರೆಸ್ ಬೆಂಬಲಿಸಿದ್ದಾರೆ. ಈ ಫಲಿತಾಂಶ ಸರ್ಕಾರದ ಮೇಲಿನ ಜನರಿಗಿರುವ ವಿಶ್ವಾಸ ತೋರಿಸುತ್ತದೆ ಎಂದು ಉತ್ತರಿಸಿದರು.
ಕೇಂದ್ರ ಸಚಿವರು ಅವರ ಗೌರವಕ್ಕೆ ತಕ್ಕಂತೆ ಮಾತನಾಡಬೇಕು. ಟೀಕೆ ಮಾಡುವುದೇ ನಾಯಕತ್ವ ಎನ್ನುವ ರೀತಿ ಮಾತನಾಡಬಾರದು. ರಾಜ್ಯ ಸರ್ಕಾರ ಕಾರು ಕೊಟ್ಟಿಲ್ಲ ಎನ್ನುವ ಮಾತನಾಡುತ್ತಾರೆ. ಕುಮಾರಸ್ವಾಮಿ ಅವರಿಂದ ಈ ರೀತಿಯ ಮಾತನ್ನು ನಾನು ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳಿದರು.