ಹೊಸದಿಗಂತ ವರದಿ, ಗದಗ:
ಮಹಾರಾಷ್ಟ್ರದಿಂದ ಸಚಿವರು ರಾಜ್ಯಕ್ಕೆ ಬಂದು ಹೋಗುವದಕ್ಕೆ ಯಾವುದೇ ಅಭ್ಯಂತರ ಇಲ್ಲ. ಆದರೆ, ಬಂದ ಸಂದರ್ಭದಲ್ಲಿ ಪ್ರಚೋದನೆ ಹೇಳಿಕೆ ನೀಡಬಾರದು. ಅನಾವಶ್ಯಕವಾಗಿ ಸ್ವಾಭಿಮಾನ ಕೆಣಕುವುದು ಯಾರಿಗೂ ಸಹಿಸಲಾಗಲ್ಲ ಎಂದು ಸಚಿವ ಹಾಲಪ್ಪ ಆಚಾರ್ ಅವರು ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾವು ಮಹಾರಾಷ್ಟ್ರಕ್ಕೆ ಹೋಗುತ್ತೆವೆ. ಅವರು ಇಲ್ಲಿಗೆ ಬರುತ್ತಾರೆ. ಮಹಾರಾಷ್ಟ್ರದ ಸಚಿವರು ಇಲ್ಲಿಗೆ ಬಂದು ಅನಾವಶ್ಯಕ ಪ್ರಚೋದನೆ ನೀಡಿ ಎಲ್ಲರೂ ರೊಚ್ಚಿಗೇಳುವಂತೆ ಮಾಡುತ್ತಾರೆ. ಮಹಾರಾಷ್ಟ್ರದವರು ತಮ್ಮ ಅಭಿಮಾನ ತಾವು ಇಟ್ಟುಕೊಳ್ಳಲಿ. ಕನ್ನಡಿಗರಿಗೂ ತಮ್ಮ ಅಭಿಮಾನ ಇರಲ್ವಾ? ಅನಾವಶ್ಯಕವಾಗಿ ವಿಷಯ ಪ್ರಸ್ತಾಪಿಸಿ ಜನರ ದಾರಿ ತಪ್ಪಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ. ಇದನ್ನು ಯಾರೂ ಸಹಿಸಲು ಆಗಲ್ಲ. ಸುಮ್ಮನೆ ಅಲ್ಲಿ ಕುಳಿತುಕೊಂಡು ಹೇಳಿಕೆ ನೀಡುವುದು ಎಷ್ಟರ ಮಟ್ಟಿಗೆ ಸರಿ?. ಸೌಹಾರ್ದಯುತ ವಾತಾವರಣ ನಿರ್ಮಾಣ ಮಾಡುವುದು ಅವರ ಮಾತುಗಳಲ್ಲಿಲ್ಲ. ಕರ್ನಾಟಕದವರು ಶಾಂತಿ ಪ್ರಿಯರು, ಒಟ್ಟಿಗೆ ಹೋಗುವವರು ಎಂಬುವದನ್ನು ಅವರು ಮೊದಲು ತಿಳಿದುಕೊಳ್ಳಲಿ ಎಂದು ಹೇಳಿದರು.
ಪ್ರತಿಭೆ ಇದ್ದವರು ಕ್ರೀಡೆಗೆ ಬರುತ್ತಾರೆ. ಕ್ರೀಡೆಯಲ್ಲಿ ಕಠಿಣ ಶ್ರಮ ಮಾಡಿ ಮುಂದೆ ಬಂದವರನ್ನು ಆಯ್ಕೆ ಮಾಡುತ್ತಾರೆ. ಜಾತಿ ನೋಡಿ ಸೆಲೆಕ್ಟ್ ಮಾಡಲ್ಲ? ಪ್ರಚಾರಕ್ಕಾಗಿ ಇಂತಹ ಅಸಂಬಂಧ ಹೇಳಿಕೆ ನೀಡುತ್ತಾರೆ ಎಂದು ನಟ ಚೇತನ್ ಅವರ ಹೇಳಿಕೆಗೆ ಸಚಿವರು ಪ್ರತಿಕ್ರಿಯಿಸಿದರು.
ಹನುಮ ಮಾಲೆ ಹಾಕಿಕೊಂಡು ಬರುವುದು ಇವತ್ತು, ನಿನ್ನೆಯದಲ್ಲ ಮತ್ತು ಹೊಸದೇನಿದೆ ಅದರಲ್ಲಿ ಅಂಜನಾದ್ರಿ ಬೆಟ್ಟಕ್ಕೆ ಹೋಗುವುದು ಸಾಮಾನ್ಯ ವಿಷಯವಾಗಿದೆ. ಇದು ಧರ್ಮದಂಗಲ್ ಯಾಕೆ ಆಗುತ್ತೆ. ಹಿಂದಿನಿಂದಲೂ ಅಂಜನಾದ್ರಿಗೆ ಬರುತ್ತಿದ್ದಾರೆ. ಧರ್ಮದಂಗಲ್ ಎಂದು ಹೇಳಿಕೆ ಕೊಟ್ಟು ಪ್ರಚಾರ ಪಡುತ್ತಿದ್ದಾರೆ ಎಂದು ಸಚಿವ ಹಾಲಪ್ಪ ಆಚಾರ ಅವರು ತಿರುಗೇಟು ನೀಡಿದರು.